ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಗವಿಮಠದ ಶ್ರೀ ಗವಿ ಸಿದ್ದೇಶ್ವರ ಜಾತ್ರೆಗೆ ಚಾಲನೆ ದೊರೆತಿದ್ದು, ಇಂದಿನಿಂದ ೧೫ ದಿನಗಳ ಕಾಲ ಜಾತ್ರಾ ಮಹೋತ್ಸವ ಜರುಗಲಿದೆ.
ದಾಸೋಹ, ಅನುಭವ, ಜ್ಞಾನ, ಜೀವನ ಚಿಂತನೆಯ ಪಾಠದ ಮೂಲಕ ಭಕ್ತಿ ಮತ್ತು ಜ್ಞಾನದ ಸಂಗಮವಾಗಿರುವ ಗವಿಮಠದ ಜಾತ್ರಾ ಮಹೋತ್ಸವದಿಂದ ಜಾತ್ರೆಗೆ ಬಂದವರು ಜ್ಞಾನದ ಬುತ್ತಿಯನ್ನು ಹೊತ್ತೋಯ್ಯಲಿ ಎಂಬುವುದು ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಆಶಯವಾಗಿದೆ.
ಉತ್ತರ ಕರ್ನಾಟಕದಿಂದ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಭಕ್ತರನ್ನು ತೃಪ್ತಿಪಡಿಸಲು ೧೪ ಲಕ್ಷ ಜಿಲೇಬಿ ಸಿದ್ದವಾಗುತ್ತಿದೆ. ಇದಕ್ಕಾಗಿ ಸಾವಿರಾರು ಬಾಣಸಿಗರು ಜಿಲೇಬಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಮೂರು ದಿನಗಳ ಕಾಲ ಮಠದ ಆವರಣದಲ್ಲಿ ಭಕ್ತಿ ಹಿತಚಿಂತನಾ ಸಮಾವೇಶ, ಧಾರ್ಮಿಕ ಕಾರ್ಯಕ್ರಮಗಳು, ಅನೇಕ ಕ್ರೀಡೆಗಳು, ಪಲಫುಷ್ಟ ಪ್ರದರ್ಶನ, ಕೃಷಿ ವಸ್ತುಗಳ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 15 ರಂದು ಗವಿಮಠದ ಜಾತ್ರೆಯ ಅಂಗವಾಗಿ ಪ್ರತಿವರ್ಷ ಗವಿಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ರಥದಲ್ಲಿ ಸ್ಥಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಸಂಜೆ 5:30ಕ್ಕೆ ಮಠದ ಮುಂದಿರುವ ಮೈದಾನದಲ್ಲಿ, ಮಹಾ ರಥೋತ್ಸವ ನಡೆಯಲಿದೆ.
ಧಾರವಾಡದ ಸುಪ್ರಸಿದ್ಧ ಹಿಂದುಸ್ಥಾನಿ ಗಾಯಕ ಪದ್ಮಶ್ರೀ ಪಂಡಿತ ಎಮ್ ವೆಂಕಟೇಶ್ ಕುಮಾರ್ ಉದ್ಘಾಟನೆ ಚಾಲನೆ ನೀಡಲಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಕೂಡಾ ಜಾತ್ರೆಯಲ್ಲಿ ಬಾಗಿಯಾಗಲಿದ್ದಾರೆ.
ಸಂಜೆ 6 ಗಂಟೆಗೆ ಮಠದ ಕೈಲಾಸ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸರಿಗಮಪ ಖ್ಯಾತಿಯ ಹರ್ಷ, ಧಾರವಾಡದ ಬಸವರಾಜ್ ವಂದಲಿ, ಹುಬ್ಬಳ್ಳಿಯ ಸುಜಯಿಂದ್ರ ಕುಲಕರ್ಣಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಜನವರಿ 16 ರಂದು ಸಂಜೆ 6 ಗಂಟೆಗೆ ಮಠದ ಕೈಲಾಸ ಮಂಟಪದಲ್ಲಿ ಭಕ್ತಿ ಹಿತಚಿಂತನ ಸಭೆ ನೆಡಯಲಿದೆ. ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ವನಬಳ್ಳಾರಿಯ ಬಸವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಅಸ್ಸಾಂನ ಜಾದವ್ ಪಾಯೆಂಗ್ ಆಗಮಿಸಲಿದ್ದಾರೆ.
ಜನವರಿ 17 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ ಶಿರೂರನ ಡಾ. ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ್ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ನಂತರ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ.