ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಗರದ ವಿವಿದೆಡೆ ವಾಹನ ಕಳವು ಮಾಡುತ್ತಿದ್ದ 16 ಮಂದಿಯನ್ನು ಬಂಧಿಸಿ 1 ಕೋಟಿ ರೂ. ಮೌಲ್ಯದ 113 ದ್ವಿಚಕ್ರ ವಾಹನಗಳು, 4 ಆಟೋ ರಿಕ್ಷಾ, 1 ಕಾರು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ರಾಜಗೋಪಾಲನಗರ: ಕಾರ್ಖಾನೆಯೊಂದರ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ರಾಜಗೋಪಾಲನಗರ ಠಾಣೆ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ಆಂಧ್ರಪ್ರದೇಶ ಮೂಲದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಆಂ‘್ರದ ಚಿತ್ತಪ್ಪಗಾರಿ ಆನಂದ(30) ಬಂಧಿತ ಆರೋಪಿಯಾಗಿದ್ದಾನೆ, ಈತ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ. ಆರೋಪಿಯು ನಗರದಲ್ಲಷ್ಟೇ ಅಲ್ಲದೆ ಬೆಂಗಳೂರು ಗ್ರಾಮಾಂತರ ಹಾಗೂ ಇತರ ಜಿಲ್ಲೆಗಳಲ್ಲೂ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದು, ಆತನಿಂದ 26.50 ಲಕ್ಷ ಮೌಲ್ಯದ 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ಬಂ‘ನದಿಂದ ಒಟ್ಟು 21 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, 9 ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ. ಇನ್ಸ್ಪೆಕ್ಟರ್ ಪುನೀತ್ ಹಾಗೂ ಸಿಬ್ಬಂದಿ ತಂಡ ಪ್ರಕರಣವನ್ನು ಬೇಧಿಸಿದೆ.
ನಂದಿನಿ ಲೇಔಟ್
ಪಾರ್ಕಿಂಗ್ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ವ್ಯಕ್ತಿಯನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ, 5.81 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನ ಹಾಗೂ ಒಂದು ಆಟೋರಿಕ್ಷಾಗಳನ್ನು ವಶಪಡಿಕೊಂಡಿದ್ದಾರೆ. ಕಳೆದ ಮೇ 14ರಂದು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ವ್ಯಕ್ತಿಯೊಬ್ಬರು ಠಾಣೆಗೆ ದೂರು ನೀಡಿದ್ದರು.
ಅಪರಾಧ ವಿಭಾಗದ ಸಿಬ್ಬಂದಿ ಲಗ್ಗೆರೆಯ ಬ್ರಿಡ್ಜ್ ಬಳಿ ಗಸ್ತಿನಲ್ಲಿದ್ದಾಗ ಈತನನ್ನು ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ನಗರದ ಹಲವು ಕಡೆಗಳಲ್ಲಿ ವಾಹನ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಇನ್ ಸ್ಪೆಕ್ಟರ್ ಲಕ್ಷ್ಮಣ್ ಅವರ ತಂಡ ಈ ಕಾರ್ಯಚರಣೆ ಕೈಗೊಂಡಿತ್ತು.
ಗಿರಿನಗರ ಠಾಣೆ
ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಆರೋಪಿಯನ್ನು ಬಂಧಿಸಿ 7.3 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿ 1.95 ಲಕ್ಷ ರೂ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್‌ಪೆಕ್ಟರ್ ಸತೀಶ್ಕುಮಾರ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ಬಾಣಸವಾಡಿ ಠಾಣೆ
ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ಮೌಲ್ಯದ ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ 7 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ 3.5 ಲಕ್ಷ ರೂ ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
10 ಬೈಕ್‌ಗಳು ಜಪ್ತಿ
ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ನೆಲೆಸಿದ್ದ ಪಿಜಿ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಡಿವಾಳ ಠಾಣೆ
ನಗರದಲ್ಲಿ ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ 13 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನ ಮತ್ತು ಎರಡು ಆಟೋ ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಕಳವು ಮಾಡಿದ ವಾಹನಗಳನ್ನು ಮಡಿವಾಳ ಮಾರುಕಟ್ಟೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದನ್ನು ಪತ್ತೆಹಚ್ಚಿ ಇನ್ಸ್‌ಪೆಕ್ಟರ್ ಮೊಹಮದ್ ಹಾಗೂ ಸಿಬ್ಬಂದಿ ತಂಡ ಜಪ್ತಿ ಮಾಡಿದೆ.
7 ದ್ವಿಚಕ್ರವಾಹನ ಜಪ್ತಿ
ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿ 4.20 ಲಕ್ಷ ರೂ. ಮೌಲ್ಯದ ಒಂದು ಆಟೋ ರಿಕ್ಷಾ ಹಾಗೂ 7 ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್‌ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ದ್ವಿಚಕ್ರ ವಾಹನ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೆಪಿನಗರ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ಮೌಲ್ಯದ ಏಳು ದ್ವಿಚಕ್ರ ವಾಹನ ಹಾಗೂ 72 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ 5 ಪ್ರಕರಣಗಳು ಪತ್ತೆಯಾಗಿದ್ದು, ಈ ಪ್ರಕರಣವನ್ನು ಇನ್ಸ್ಪೆಕ್ಟರ್ ರಾಧಾಕೃಷ್ಣ ಅವರ ನೇತೃತ್ವದ ತಂಡ ಬೇಧಿಸಿದೆ.
ತಲಘಟ್ಟಪುರ ಠಾಣೆ
ದಾರಿಹೋಕರನ್ನು ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಸರ ಅಪಹರಿಸಿ ಪರಾರಿಯಾಗಿದ್ದ ಸರಗಳ್ಳನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ರೂ. ಮೌಲ್ಯದ 40 ಗ್ರಾಂ ಮಾಂಗಲ್ಯಸರ ಹಾಗೂ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಕಾರು ವಶಕ್ಕೆ
ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದಂತಹ ಕಾರು ಮತ್ತು ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿ 5.6 ಲಕ್ಷ ರೂ. ಮೌಲ್ಯದ ಒಂದು ಕಾರು ಹಾಗೂ 3 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.