ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯು ಭಾರತೀಯ ತಂಡಕ್ಕೆ ಯಾವುದೇ ಒಳಿತು ಮಾಡಿಲ್ಲ. ಬದಲಿಗೆ ಒಡಕು ಮೂಡಿಸಿದ್ದು, ಮನೆಯೊಂದು ಮೂರು ಬಾಗಿಲು ಆದಂತಾಗಿದೆ.
ಭಾರತವು ಬಾರ್ಡರ್-ಗವಾಸ್ಕರ್ ಪದಕವನ್ನು ಕಳೆದುಕೊಂಡಿದ್ದಲ್ಲದೆ, ಪ್ರತಿಷ್ಠಿತ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಥಾನವನ್ನು ಕಳೆದುಕೊಂಡಿತು. ಸರಣಿಯಲ್ಲಿ ಆಸ್ಟ್ರೇಲಿಯಾ ಭಾರತವನ್ನು 3-1 ಅಂತರದಿಂದ ಸೋಲಿಸಿತು.
ಇದಕ್ಕಿಂತ ಗಾಬರಿಯ ವಿಷಯವೆಂದರೆ ತಂಡದ ಒಗ್ಗಟ್ಟು ದಿಕ್ಕಪಾಲಿದ್ದು. ಈ ಸರಣಿ ಮುಕ್ತಯದ ವೇಳೆಗೆ ತಂಡವು ಕನಿಷ್ಟ ಮೂರು ಭಾಗಗಳಾಗಿ ಹೋಗಿದೆ ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ. ಇದೀಗ ಬಂದಿರುವ ವರದಿಗಳ ಪ್ರಕಾರ ತಂಡವು ಕೋಚ್ ಗಂಭೀರ್, ನಾಯಕ ರೋಹಿತ್ ಮತ್ತು ಮಾಜಿ ನಾಯಕ ಕೊಹ್ಲಿ ನಡುವೆ ತಂಡ ಮೂರು ಹಂಚಿಕೆ ಆಗಿದೆ.
ಭಾರತ ತಂಡವು ಕಳೆದ ಹತ್ತು ಟೆಸ್ಟ್ ಪಂದ್ಯಗಳಲ್ಲಿ ಆರರಲ್ಲಿ ಸೋತಿರುವುದರಿಂದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗಗಳನ್ನು ಈಗ ಪ್ರಶ್ನಿಸಲಾಗುತ್ತಿದೆ. 4ನೇ ಟೆಸ್ಟ್ ಪಂದ್ಯದ ಬಳಿಕ ಟೀಂ ಇಂಡಿಯಾದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ನವೆಂಬರಲ್ಲಿ ಆಸ್ಟ್ರೇಲಿಯಾಕ್ಕೆ ಆಗಮಿಸುವ ಮೊದಲೇ ತಂಡದೊಳಗಿನ ಒತ್ತಡ ಪ್ರಾರಂಭವಾಗಿತ್ತು.
ಪರ್ತಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಪ್ರಾರಂಭಿಸಿದಾಗಲೂ ಭಾರತೀಯ ಕ್ರಿಕೆಟ್ ತಂಡವು ಏಕತೆಯನ್ನು ಗಳಿಸಲು ವಿಫಲವಾಯಿತು. “ತಂಡದ ಸದಸ್ಯರು ಒಟ್ಟಿಗೆ ಊಟಕ್ಕೆ ಹೊರಗೆ ಹೋಗಲಿಲ್ಲ. ಬದಲಾಗಿ, ಅವರು ಸಣ್ಣ ಗುಂಪುಗಳಾಗಿ ಒಡೆದು ತಮ್ಮ ಪ್ರತ್ಯೇಕ ಮಾರ್ಗಗಳಲ್ಲಿ ಹೋದರು.
ಪರ್ತ್‌ನಲ್ಲಿ ೨೯೫ ರನ್‌ಗಳಿಂದ ಗೆದ್ದರೂ ತಂಡದಲ್ಲಿನ ವಾತಾವರಣ ಸುಧಾರಿಸಲು ಅದು ವಿಫಲವಾಯಿತು ಎಂದು ವರದಿ ಹೇಳಿದೆ. ಐತಿಹಾಸಿಕ ಗೆಲುವು ಕೂಡ ತಂಡದ ಸಂಭ್ರಮಾಚರಣೆಯನ್ನು ಪ್ರಚೋದಿಸಲಿಲ್ಲ. ಆಟಗಾರರು ಒಟ್ಟಾಗಿ ಕಲೆತು ಬೆರೆಯದೆ ತಮ್ಮದೇ ಪ್ರತ್ಯೇಕ ಗುಂಪುಗಳನ್ನು ಮಾಡಿಕೊಂಡು ತಿರುಗಾಡುತ್ತಿದ್ದರು ಎಂದು ವರದಿಗಳು ಹೇಳಿವೆ.
ಕೋಚ್‌ಗಳ ನಡುವೆಯೇ ಮನಸ್ತಾಪ
ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು ತಾಲೀಮಿಗೆ ತಡವಾಗಿ ಬರುತ್ತಿದ್ದರು. ಇದೇ ಕಾರಣಕ್ಕಾಗಿ ಗೌತಮ್ ಗಂಭೀರ್ ಮತ್ತು ಮಾರ್ಕೆಲ್ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.
ಮಾರ್ನೆ ಮಾರ್ಕೆಲ್ ವೈಯಕ್ತಿಕ ಕಾರಣಗಳಿಂದಾಗಿ ನೆಟ್ಸ್‌ಗೆ ತಡವಾಗಿ ಬರುತ್ತಿದ್ದರು. `ಗೌತಮ್ ಗಂಭೀರ್ ಬಹಳ ಶಿಸ್ತುಬದ್ಧ ವ್ಯಕ್ತಿ. ಅವರು ಈ ಕಾರಣಕ್ಕಾಗಿ ಮಾರ್ಕೆಲ್ ಅವರನ್ನು ಮೈದಾನದಲ್ಲೇ ಖಂಡಿಸಿದ್ದರು.
ಮಾರ್ನೆ ಮಾರ್ಕೆಲ್ ಅವರು ತಮ್ಮದೇ ಪ್ರಪಂಚದಲ್ಲಿ ಇರುತ್ತಿದ್ದರು. ಹೀಗಾಗಿ ಇವರಿಬ್ಬರ ನಡುವೆ ಸರಿಯಾದ ತಾಳಮೇಳ ಇರಲಿಲ್ಲ. ಇದು ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಿತು” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇನ್ನು ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಅವರ ಕಾರ್ಯತತ್ಪರತೆಯ ಬಗ್ಗೆಯೂ ಪ್ರಶ್ನೆಗಳಿವೆ. ಸ್ವತಃ ಗಂಭೀರ್ ಅವರೇ ವಿಶ್ವದರ್ಜೆಯ ಬ್ಯಾಟರ್ ಆಗಿದ್ದವರು. ಇನ್ನು ನಾಯರ್ ಅವರಿಂದ ಏನು ಪ್ರಯೋಜನವಾಗಿದೆ ಎಂದು ಆಟಗಾರರನ್ನು ಮಂಡಳಿ ಪ್ರಶ್ನಿಸಿದೆ.