ಎಟಿಎಎಂ ವಾಹನದ ಮೇಲೆ ಗುಂಡು ಹಾರಿಸಿ ಇಬ್ಬರನ್ನು ಹತ್ಯೆಗೈದ ದುಷ್ಕರ್ಮಿಗಳು ಹಾಡುಹಗಲೇ ಸುಮಾರು 83 ಲಕ್ಷ ರೂ. ಹಣ ದರೋಡೆ ಮಾಡಿದ ಆಘಾತಕಾರಿ ಘಟನೆ ಬೀದರ್ ನಲ್ಲಿ ನಡೆದಿದೆ.
ಗುರುವಾರ ಬೆಳಿಗ್ಗೆ ಶಿವಾಜಿ ರಾವ್ ವೃತ್ತದ ಬಳಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಎಟಿಎಂ ವಾಹನದ ಸಿಬ್ಬಂದಿ ಮೇಲೆ 5 ಸುತ್ತು ಗುಂಡು ಹಾರಿಸಿದ್ದಾರೆ. ಇದರಲ್ಲಿ ಗಿರಿ ವೆಂಕಟೇಶ್ ಎಂಬುವವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸಿಬ್ಬಂದಿ ಶಿವಕುಮಾರ್ (26) ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಬೀದರ್ ನ ಎಸ್‌ಬಿಐ ಬ್ಯಾಂಕ್ ಕಚೇರಿಯ ಎಟಿಎಂಗೆ ಹಣ ಹಾಕಲು ಏಜೆನ್ಸಿಯ ಸಿಬ್ಬಂದಿ ವಾಹನದಲ್ಲಿ ಬಂದಿದ್ದಾಗ ಇಬ್ಬರು ದುಷ್ಕರ್ಮಿಗಳು ಬಂದು ಗುಂಡು ಹಾರಿಸಿದ್ದಾರೆ. ಬಳಿಕ ಉಳಿದ ಸಿಬ್ಬಂದಿ ಮೇಲೆ ಕಣ್ಣಿಗೆ ಖಾರದ ಪುಡಿ ಎರಚಿ ಹಣವನ್ನು ಖದೀಮರು ಕದ್ದೊಯ್ದಿದ್ದಾರೆ.
ದುಷ್ಕರ್ಮಿಗಳು 5 ಸುತ್ತಿನ ಗುಂಡಿನ ದಾಳಿ ನಡೆದ ಬಳಿಕ ಹಣ ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ತನಿಖೆ ಆರಂಭಿಸಿರುವ ಬೀದರ್ ಪೊಲೀಸರು ಎಟಿಎಂ ವಾಹನದಲ್ಲಿ 87 ಲಕ್ಷ ರೂ. ಇತ್ತು. ದರೋಡೆಕೋರರು 83 ಲಕ್ಷ ರೂ. ಕದ್ದೊಯ್ದಿದ್ದಾರೆ ಎಂದು ಅಂದಾಜಿಸಲಾಗಿದೆ. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದ್ದು, ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.