ನವದೆಹಲಿ: ಈ ಬಾರಿಯ ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭವಾಗಲಿದ್ದು, ಏಪ್ರಿಲ್ 4ರವರೆಗೆ ನಡೆಯಲಿದೆ. ಫೆ. 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಇದು ಅವರ 8ನೇ ಬಜೆಟ್ ಮಂಡನೆಯಾಗಲಿದೆ.
ಬಜೆಟ್ ಅಧಿವೇಶನದ ಮೊದಲ ದಿನ ಜನವರಿ 31ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸಂಸತ್ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣೆ ಮಾಡಲಿದ್ದು, ಆರ್ಥಿಕ ಸಮೀಕ್ಷೆ ಮಂಡನೆ ಕೂಡ ಆಗಲಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಂಸದೀಯ ಸಚಿವ ಕಿರಣ್ ರಿಜಿಜು ಅವರು ರಾಷ್ಟ್ರಪತಿಗಳು 2025ರ ಜನವರಿ 31ರಂದು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆ.1ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31ರಿಂದ ಫೆಬ್ರವರಿ 13ರವರೆಗೆ 9 ದಿನಗಳ ಕಾಲ ನಡೆಯಲಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸಲಿದ್ದು, ಸೀತಾರಾಮನ್ ಬಜೆಟ್ ಚರ್ಚೆಗೆ ಉತ್ತರಿಸಲಿದ್ದಾರೆ.
ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸಲು ಸಂಸತ್ ವಿರಾಮ ಪಡೆಯಲಿದ್ದು, ಮತ್ತೆ ಮಾರ್ಚ್ 10ರಿಂದ ಸಮಾವೇಶಗೊಳ್ಳಲಿದೆ. ಈ ವೇಳೆ ಬಜೆಟ್ ಪ್ರಸ್ತಾವನೆಗಳ ಪೂರ್ಣಗೊಳಿಸುವುವಿಕೆ ಹಾಗೂ ಅನುದಾನ ಹಂಚಿಕೆ ಬೇಡಿಕೆ ವಿಚಾರದಲ್ಲಿ ಚರ್ಚೆಗಳು ಸಾಗಲಿದೆ. ಈ ಅಧಿವೇಶನ ಏಪ್ರಿಲ್ 4ರಂದು ಪೂರ್ಣಗೊಳ್ಳಲಿದ್ದು, ಒಟ್ಟು 27 ದಿನ ಸಾಗಲಿದೆ.