ಮಂಗಳೂರು ದರೋಡೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಗಳನ್ನು ಸ್ಥಳ ಮಹಜರು ನಡೆಸಲು ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಕರ್ನಾಟಕ- ಕೇರಳ ಗಡಿಯ ಭಾಗದ ತಲಪಾಡಿಯ ಅಲಂಕಾರು ಗುಡ್ಡದ ಬಳಿ ಈ ಘಟನೆ ನಡೆದಿದ್ದು, ಆರೋಪಿ ಕಣ್ಣನ್ ಮಣಿ ಕಾಲಿಗೆ ಗುಂಡು ತಗುಲಿದೆ.
ತಮಿಳುನಾಡಿನ ತಿರುವನ್ವೆಲಿಯಲ್ಲಿ ಮೂವರು ಆರೋಪಿಗಳಾದ ಮುರುಗನ್ ಡಿ. ದೇವರ್, ಯೋಶುವಾ ರಾಜೇಂದ್ರನ್, ಕಣ್ಣನ್ ಮಣಿ ಅವರನ್ನು ಬಂಧಿಸಿದ್ದ ಪೊಲೀಸರು, ಮಂಗಳವಾರ ಸ್ಥಳ ಮಹಜರು ಮಾಡಲು ಅಲಂಕಾರು ಗುಡ್ಡದ ಬಳಿ ಕರದೊಯ್ದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಮಹಜರು ಬಳಿ ಕಣ್ಣನ್‌ಮಣಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ. ಈ ವೇಳೆ ಇನ್ಸ್ ಪೆಕ್ಟರ್ ರಫೀಕ್, ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗಾಯವಾಗಿರುವ ಕಣ್ಣನ್ ಮಣಿಯನ್ನು ದೇರಳಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದರೋಡೆಕೋರರ ದಾಳಿ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.