Sunday, November 24, 2024
Google search engine
Homeಜಿಲ್ಲಾ ಸುದ್ದಿಕೇಂದ್ರ ಸಚಿವ ಭಗವಂತ್ ಖೂಬಾ 25 ಕೋಟಿ ರೂ. ವಂಚನೆ: ಗಣಿ ಇಲಾಖೆಯಿಂದ ನೋಟಿಸ್

ಕೇಂದ್ರ ಸಚಿವ ಭಗವಂತ್ ಖೂಬಾ 25 ಕೋಟಿ ರೂ. ವಂಚನೆ: ಗಣಿ ಇಲಾಖೆಯಿಂದ ನೋಟಿಸ್

ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಸರ್ಕಾರದ ಬೊಕ್ಕಸಕ್ಕೆ 25 ಕೋಟಿ ರೂ. ನಷ್ಟ ಮಾಡಿ ವಂಚಿಸಿದ್ದು, ಗಣಿ ಇಲಾಖೆ ನೋಟಿಸ್ ನೀಡಿದೆ ಎಂದು ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ ಮಾಡಿದ್ದಾರೆ.

ಬೀದರ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಗವಂತ್ ಖೂಬಾ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಲೂಟಿ ಮಾಡಿರುವ ಕಳ್ಳ. ಒಬ್ಬ ಕೇಂದ್ರ ಸಚಿವರಾಗಿ ಸರ್ಕಾರಕ್ಕೆ ಸುಮಾರು 25 ಕೋಟಿ ರೂಪಾಯಿ ದ್ರೋಹ ಮಾಡಿದ್ದಾರೆ. ವಂಚನೆ ಮಾಡಿದ್ದಾರೆ. ಇದನ್ನು ತಮ್ಮ ಅಫಿಡವಿಟ್ ನಲ್ಲಿ ಕೂಡ ತಪ್ಪು ಮಾಹಿತಿ ನೀಡಿದ್ದಾರೆ. ಇವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ನಾನು ಖೂಬಾ ರೀತಿ ಆಧಾರ ರಹಿತ ಆರೋಪ ಮಾಡುವುದಿಲ್ಲ. ಖೂಬಾ ಅಫಿಡವಿಟ್ ನ ಪುಟ ಸಂಖ್ಯೆ 15ರ 10ನೇ ಕಾಲಂನಲ್ಲಿ liabilities that are under dispute ಕಾಲಂನಲ್ಲಿ Demand notice from Dy. Director, Dept of Mines and geology, Kalaburgi of Rs. 54,51,733 and appealed against this demand to the above said department. ಎಂದು ತಿಳಿಸಿದ್ದಾರೆ.

ಆದರೆ ಅವರಿಗೆ ದಿನಾಂಕ 18.07.2019ರಲ್ಲೇ ಅವಧಿ ಮುಗಿದಿರುವ ಕಲ್ಲುಗಣಿ ಗುತ್ತಿಗೆಯಲ್ಲಿ ಅಕ್ರಮ ಮಾಡಿ ಬಾಕಿ ರಾಜಧನ ಪಾವತಿಸುವಂತೆ ಬಿಜೆಪಿ ಸರ್ಕಾರವಿದ್ದಾಗ 2023ರಲ್ಲಿ ಖೂಬಾ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿದೆ. 01.07.2023ರ ನೋಟಿಸ್ ಸಂಖ್ಯೆ: ಗಭೂಇ/ಉ.ನಿ.ಕ/ಕ.ಗ.ಗು/ಬಾಕಿ/2023-24/1933ರ ರೀತ್ಯ 77ಲಕ್ಷ 49 ಸಾವಿರ 221 ರೂಪಾಯಿ ಬಾಕಿ ಪಾವತಿಸುವಂತೆ ತಿಳಿಸಲಾಗಿದೆ. ಆದರೆ ಖೂಬಾ ಕೇವಲ 54 ಲಕ್ಷ ಎಂದು ತೋರಿಸಿದ್ದಾರೆ. ಇದಾದ ಬಳಿಕ  ಅಂದರೆ ಇವರ ಅಫಿಡವಿಟ್ ನಲ್ಲೇ ಪ್ರಮಾಣ ಪತ್ರದಲ್ಲೇ ಸುಳ್ಳು ಹೇಳಿದ್ದಾರೆ.

ಇನ್ನೂ ಇತ್ತೀಚಿನ ಮಾಹಿತಿ ಎಂದರೆ. ದಿನಾಂಕ 18.04.2024ಅಂದರೆ ಭಗವಂತ ಖೂಬಾ ನಾಮಪತ್ರ ಸಲ್ಲಿಸುವ ಹಿಂದಿನ ದಿನ ಇವರಿಗೆ ಉಪ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಲಬುರ್ಗಿ ಇವರು ನೀಡಿರುವ ನೋಟಿಸ್ ಸಂಖ್ಯೆ : ಗಭೂಇ/ಉ.ನಿ.ಕ/ಕ.ಗ.ಗು/ಸಂ-431/2024-25/136 ಜಾರಿ ಮಾಡಿದ್ದು, ಇದರಲ್ಲಿ ಭಗವಂತ ಖೂಬಾ, ತಂದೆ ಗುರುಬಸಪ್ಪ ಖೂಬಾ ಇವರು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಚ್ಚಾ ಗ್ರಾಮದ ಸರ್ವೆ ನಂ.24/4ರಲ್ಲಿ 2 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡಲು 5 ವರ್ಷದ ಅವಧಿಗೆ ಅನುಮತಿ ಅಥವಾ ಪರವಾನಗಿ ಪಡೆದು, ಸರ್ವೆ ನಂ.24/2, ಸರ್ವೆ ನಂ.24/3, ಸರ್ವೆ ನಂ.24/5, ಸರ್ವೆ ನಂ.24/7, ಸರ್ವೆ ನಂ.24/8, ಸರ್ವೆ ನಂ.24/10, ಸರ್ವೆ ನಂ.24/5/1 ಮತ್ತು ಸರ್ವೆ ನಂ.25/1 ರಲ್ಲಿ ಒಟ್ಟು 8 ಎಕರೆಗಿಂತ ಹೆಚ್ಚಿನ ಜಮೀನಿನಲ್ಲಿ ಅನಧಿಕೃತವಾಗಿ, ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಲೂಟಿ ಮಾಡಿರುತ್ತಾರೆ, ಅಕ್ರಮ ಸಾಗಣೆ ಮಾಡಿರುತ್ತಾರೆ ಎಂದು 25 ಕೋಟಿ 28 ಲಕ್ಷದ 93 ಸಾವಿರದ 50 ರೂಪಾಯಿ ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ. ಆದರೆ ಈ ವಿಷಯವನ್ನು ಖೂಬಾ ತಮ್ಮ ಅಫಿಡವಿಟ್ ನಲ್ಲಿ ಮುಚ್ಚಿಟ್ಟಿದ್ದಾರೆ.

ಭಗವಂತ ಖೂಬಾ 25 ಕೋಟಿ ರೂಪಾಯಿ ದಂಡ ಕಟ್ಟಬೇಕು ಎಂದರೆ ಇವರು ನೂರಾರು ಕೋಟಿ ಕಲ್ಲು ಲೂಟಿ ಮಾಡಿದ್ದಾರೆ. 2 ಎಕರೆಗೆ ಅನುಮತಿ ಪಡೆದು 8 ಎಕರೆಯಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಸರ್ಕಾರಕ್ಕೇ ಮೋಸ ಮಾಡುವ ಇವರು ಜನರಿಗೆ ಮೋಸ ಮಾಡದೇ ಇರುತ್ತಾರೆಯೇ.. ಹೀಗೆ ಇನ್ನೂ ಯಾವ ಯಾವ ವ್ಯವಹಾರದಲ್ಲಿ ರಾಜ್ಯದ ಸಂಪತ್ತನ್ನು ಎಷ್ಟು ಲೂಟಿ ಮಾಡಿದ್ದಾರೋ ಗೊತ್ತಿಲ್ಲ. ಖೂಬಾ ಅವರೇ ಬೀದರ್ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂಪಾಯಿ ಅನುದಾನ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾವ ಬೃಹತ್ ಯೋಜನೆಯೂ ಕಣ್ಣಿಗೆ ಕಾಣುತ್ತಿಲ್ಲ. ಇದರಲ್ಲಿ ಅದೆಷ್ಟು ಕೋಟಿ ರೂಪಾಯಿ ಲೂಟಿ ಮಾಡಿದ್ದಾರೋ ಆ ದೇವರಿಗೇ ಗೊತ್ತು.  ಈಗ ನೀವೇ ಹೇಳಿ ಸುಳ್ಳು ಹೇಳುತ್ತಿರೋದು ಯಾರು?

ಕೇಂದ್ರ ಸಚಿವರಾಗಿ ರಸ್ತೆಗುತ್ತಿಗೆಯಲ್ಲಿ, ಹೊರಗುತ್ತಿಗೆ ನೌಕರರ ಗುತ್ತಿಗೆಯಲ್ಲಿ ಹಾಗೂ ವಿವಿಧ ಕಾಮಗಾರಿಗಳನ್ನು ತಮ್ಮ ಸೋದರರು, ನೆಂಟರುಗಳಾದ ಜಗದೀಶ್ ಖೂಬಾ, ಅರುಣ್ ಖೂಬಾ ಮತ್ತು ಅಶೋಕ್ ಖೂಬಾ ಅವರಿಗೆ ವಿವಿಧ ಇಲಾಖೆಗಳ ಗುತ್ತಿಗೆ ಕೊಡಿಸಿ. ಸ್ವಜನ ಪಕ್ಷಪಾತ ಮಾಡಿ, ಅದರಲ್ಲೂ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ. ಇವರು ನಿಜವಾದ ಕಲೆಕ್ಷನ್ ಏಜೆಂಟ್. ಖೂಬಾ ಬೇನಾಮಿ ಆಸ್ತಿ ಸುಮಾರು 200 ಕೋಟಿ ಅಂತ ಜನ ಮಾತನಾಡುತ್ತಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.

ಇನ್ನು ಸರ್ಕಾರಿ ನೌಕರರು, ವಿವಿಧ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಚುನಾವಣೆ ದಿನಾಂಕ ಆರಂಭವಾದಾಗಿನಿಂದ ಈವರೆಗೆ ನೂರಾರು ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ ಆ ಯಾವುದೇ ದೂರಿಗೆ ಆಧಾರ ಇಲ್ಲ. ಪುರಾವೆ, ಸಾಕ್ಷಿ, ದಾಖಲೆ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಅವರು ಸಲ್ಲಿಸಿದ್ದ ಬಹುತೇಕ ದೂರುಗಳನ್ನು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಇತ್ಯರ್ಥ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments