Wednesday, June 10, 2026
Google search engine
Homeರಾಜ್ಯಸಿದ್ದರಾಮಯ್ಯ, ಡಿಕೆಶಿ ಜೊತೆಗೂಡಿ ಹೋರಾಟ ನಡೆಸಲು ಸಿದ್ಧ: ಎಚ್.ಡಿ. ದೇವೇಗೌಡರ ಗುಡುಗು

ಸಿದ್ದರಾಮಯ್ಯ, ಡಿಕೆಶಿ ಜೊತೆಗೂಡಿ ಹೋರಾಟ ನಡೆಸಲು ಸಿದ್ಧ: ಎಚ್.ಡಿ. ದೇವೇಗೌಡರ ಗುಡುಗು

ಬೆಂಗಳೂರು: ಗೋದಾವರಿ-ಕೃಷ್ಣ-ಕಾವೇರಿ ನೀರಾವರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 ಟಿಎಂಸಿ ಅಡಿ ನೀರು ಪಡೆಯಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೂಡಿ ಹೋರಾಟ ನಡೆಸಲು ಸಿದ್ಧ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ಟಿಎಂಸಿ ಅಡಿ ನೀರು ಪಡೆಯಲು ಸಿಎಂ, ಡಿಸಿಎಂ ಅಲ್ಲದೇ ಕಾಂಗ್ರೆಸ್ ಸಂಸದರ ಜತೆಗೂಡಿ ಹೋರಾಟ ನಡೆಸಲು ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದರು.

ನಾಡಿನ ವಿಷಯ ಬಂದಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಭೇಧ ಮರೆತು ಒಟ್ಟಾಗಿ ಕೆಲಸ ಮಾಡಬೇಕು. ಇಂತಹ ಸಂಘಟಿತ ಪ್ರಯತ್ನಕ್ಕೆ ನಾನು ಹಿಂಜರಿಯುವುದಿಲ್ಲ. ನೀರಾವರಿ ಯೋಜನೆಗಳ ಜಾರಿ ವಿಷಯದಲ್ಲಿ ಜೆಡಿಎಸ್ ಸುಮ್ಮನೆ ಕೂತಿಲ್ಲ, ಕೂರುವುದೂ ಇಲ್ಲ. ನದಿ ಜೋಡಣೆ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅದು ಸರಿಯಲ್ಲ. ಹಿಂದೆ ಸಿದ್ದರಾಮಯ್ಯ ಅವರು ನೀರಾವರಿ ಬಗ್ಗೆ ಚರ್ಚೆ ಮಾಡುವುದಕ್ಕೆ ನಮ್ಮ‌ ಮನೆಗೆ ಬಂದಿದ್ದರು. ಆಗ ನನಗೂ ಅವರಿಗೂ ಮಾತೇ ಇರಲಿಲ್ಲ. ಆದರೂ ನಾನು ಅವರ ಹಿಂದೆ ಹೋದೆ. ಈ ಬಗ್ಗೆ ನನಗೇನು ಬೇಸರ ಇಲ್ಲ. ನೀರಾವರಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೇಡ ಎಂದು ಅವರು ಹೇಳಿದರು.

ಸಂಸತ್ ಅಧಿವೇಶನದಲ್ಲಿ ಇದೇ ವಿಷಯದ ಮೇಲೆ ಚರ್ಚೆ ಮಾಡಿದ್ದೇನೆ. ಗೋದಾವರಿ- ಕೃಷ್ಣ-ಕಾವೇರಿ ಯೋಜನೆ ವಿಚಾರವಾಗಿ ರಾಜ್ಯಕ್ಕೆ ನೀರಿನ ಹಂಚಿಕೆ ಹೆಚ್ಚಳ ಮಾಡುವಂತೆ ನಾನು ಪ್ರಧಾನಿಗಳು ಹಾಗೂ ಕೇಂದ್ರದ ಜಲಶಕ್ತಿ ಸಚಿವರಿಗೆ ಮನವಿ ಮಾಡಿದ್ದೇನೆ. ಈ ಬಗ್ಗೆ 2022, 2024ರಲ್ಲಿ ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದೆ. ಸದ್ಯ ಈ ಯೋಜನೆಯಲ್ಲಿ ಕರ್ನಾಟಕಕ್ಕೆ 15.891 ಟಿಎಂಸಿ  ನೀರು ಹಂಚಿಕೆ ಮಾಡಲಾಗಿದೆ. ಆದರೆ, ಈ ಪ್ರಮಾಣವನ್ನು 25 ಟಿಎಂಸಿಗೆ ಹೆಚ್ಚಳ ಮಾಡಬೇಕು ಅಂತ ಒತ್ತಾಯ ಮಾಡಿದ್ದೇನೆ ಎಂದು ಅವರು ಪುನರುಚ್ಚಾರ ಮಾಡಿದರು.

ಗೋದಾವರಿ ನದಿಯಿಂದ ರಾಜ್ಯಕ್ಕೆ 15.91 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಿ, ಆ ನೀರನ್ನು ಘಟಪ್ರಭಾ ನದಿಗೆ ಹರಿಸುತ್ತೇವೆ ಎಂದು ಹೇಳಿದ್ದಾರೆ. ಇದು ಹೇಗೆ ಸಾಧ್ಯ? ಯಾವ ರೀತಿ ಸಾಧ್ಯ ಮಾಡುತ್ತೀರಿ? ಎನ್ನುವ ಪ್ರಶ್ನೆಯನ್ನು ನಾನು ಸಂಸತ್ತಿನಲ್ಲಿ ಕೇಳಿದ್ದೇನೆ. ಜತೆಗೆ, ಕರ್ನಾಟಕಕ್ಕೆ ಗೋದಾವರಿಯಿಂದ ಹರಿಸುವ ನೀರನ್ನು ಕಾವೇರಿಗೆ ಎಲ್ಲಿ ಜೋಡಿಸುತ್ತೀರಿ? ಎಂದು ಸಹ ಕೇಳಿದ್ದೇನೆ. ಈ ಬಗ್ಗೆ ಯೋಜನೆಯಲ್ಲಿ ಸ್ಪಷ್ಟವಾಗಿ ತೋರಿಸಿಲ್ಲ. ಆ ಬಗ್ಗೆ ರಾಜ್ಯಕ್ಕೆ ನಿಖರವಾದ ಮಾಹಿತಿ ಬೇಕಿದೆ. ಇದರ ಕುರಿತು ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಕಾಂಗ್ರೆಸ್ ಅನೇಕ ನೀರಾವರಿ ಯೋಜನೆಗಳನ್ನು ಮಾಡಿದೆ. ಆದರೆ, ಅನುಷ್ಠಾನಕ್ಕೆ ಹಣ ಇಡಲಿಲ್ಲ. ಅದರ ಬಗ್ಗೆ ನಾನು ಯಾಕೆ ಚರ್ಚೆ ಮಾಡಲಿ? ನಾನೇನು ಮಾಡಿದ್ದೇನೆ ಎಂಬುದಕ್ಕೆ ದಾಖಲೆ ಇದೆ. ಕಾವೇರಿ ನೀರು ಸದ್ವಿನಿಯೋಗ ಮಾಡಿಕೊಳ್ಳಲು ನಾನೇನು ಮಾಡಿದ್ದೇನೆ ಎನ್ನುವುದಕ್ಕೆ ದೊಡ್ಡ ಇತಿಹಾಸ ಇದೆ. ಸದನದಲ್ಲಿ ನಾನು ಏನೆಲ್ಲಾ ಹೋರಾಟ ನಡೆಸಿದ್ದೇನೆ ಎನ್ನುವುದಕ್ಕೆ ದಾಖಲೆ ಇದೆ. ಪರಿಶೀಲನೆ ಮಾಡಬಹುದು. ಭದ್ರಾ ಮೇಲ್ದಂಡೆಗೆ ಅನುಮತಿ ಕೊಡಿ ಎಂದು ಕೇಂದ್ರಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದೇನೆ. ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಮಹದಾಯಿ ಬಗ್ಗೆ ಕೂಡ ನಾನು ಹೋರಾಟ ನಡೆಸಿದ್ದೇನೆ ಎಂದು ಅವರು ವಿವರಿಸಿದರು.

ರಾಜ್ಯಕ್ಕೆ 25 ಟಿಎಂಸಿ ನೀರು ಕೊಡಬೇಕು. ಇದು ನಮ್ಮ ಡಿಮ್ಯಾಂಡ್. ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ 25 ಟಿಎಂಸಿ ನೀರು ಕರ್ನಾಟಕಕ್ಕೆ ಹಂಚಿಕೆ ಆಗಬೇಕು. ಇದು ದೊಡ್ಡ ಗುರಿ. ರಾಜಕೀಯದ ಅಗತ್ಯ ಇಲ್ಲ. ನಮ್ಮ ನಮ್ಮ ನಡುವೆಯೇ ಭಿನ್ನಾಭಿಪ್ರಾಯ ಬೇಡ. ಒಟ್ಟಾಗಿ ರಾಜ್ಯಕ್ಕಾಗಿ ಹೊರಾಟ ಮಾಡೋಣ ಎಂದು ಅವರು ಒತ್ತಿ ಹೇಳಿದರು.

ತಮಿಳುನಾಡಿಗೆ ನೀರಿನ ಸಮಸ್ಯೆ ಇಲ್ಲ‌. ಯಥೇಚ್ಚವಾಗಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಈ ಬಗ್ಗೆ ಸಂಸತ್ ನಲ್ಲಿ ಮಾತಾಡೋವಾಗ ತಮಿಳುನಾಡಿನವರು ವಿರೋಧ ಮಾಡಲಿಲ್ಲ. ನೀರು ಪಡೆಯಲು ನಾವು ಪಕ್ಷಬೇಧ ಮರೆತು ಒಟ್ಟಾಗಿ ಹೋರಾಟ ಮಾಡುತ್ತೇವೆ. ನನಗೆ ಆ ವಿಶ್ವಾಸ ಇದೆ ಎಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಗೋದಾವರಿ-ಕಾವೇರಿ ಬಗ್ಗೆ ಸಂಸತ್ ನಲ್ಲಿ ನಾನು ಮಾತಾಡಿದ್ದೇನೆ. ತಮಿಳುನಾಡಿನ ಎಲ್ಲಾ ರಾಜ್ಯಸಭೆ ಸದಸ್ಯರು ಒಕ್ಕೊರಳಿನಿಂದ ಗೋದಾವರಿ, ಕಾವೇರಿ ಅಂತ ಕೂಗಿದರು. ಇದರಲ್ಲಿ ಕರ್ನಾಟಕದ ಹೋರಾಟ ಮೊದಲಿನಿಂದಲೂ ಇದೆ. ನಾನು ನೀರಾವರಿ ಮಂತ್ರಿ ಆಗಿದ್ದಾಗಿನಿಂದ ಹೋರಾಟ ನಡೆಯುತ್ತಲೇ ಇದೆ. ಕಾವೇರಿ ನೀರು ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗಿದೆ. ಇದನ್ನು ಮೋದಿ ಅವರ ಗಮನಕ್ಕೆ ತಂದಿದ್ದೇನೆ. ನಮ್ಮ ರಾಜ್ಯದ ಒಬ್ಬರು ಪುಣ್ಯಾತ್ಮರು ನೀರು ಕೊಡುತ್ತೇನೆ ಎಂದು ಹೇಳಿದ್ದಾರೆ. ಅವರು ನೀರು ಕೊಟ್ಟರೆ ಸಂತೋಷ. ಚಿತ್ರದುರ್ಗ, ತುಮಕೂರು ಸೇರಿದಂತೆ ನೀರೇ ಕಾಣದ ಪ್ರದೇಶಗಳಿಗೆ ನೀರು ಹೋಗಬೇಕು. ಎಲ್ಲಿಂದಾದರೂ ನೀರು ಕೊಡಲಿ ಎಂದು ಅವರು ಹೇಳಿದರು.

ಕೊನೆಯ ಆಸೆ ಹೇಳಿದ ಮಾಜಿ ಪ್ರಧಾನಿ

ರಾಜ್ಯಕ್ಕೆ ನೀರಿನ ವಿಷಯದಲ್ಲಿ ನ್ಯಾಯ ಸಿಗಬೇಕು. ಅದೇ ನನ್ನ ಜೀವನದ ಕೊನೆಯ ಆಸೆ. ಈ ದೇಹ ಅಂತ್ಯ ಆಗುವುದರ ಒಳಗಾಗಿ ನಮ್ಮ ರಾಜ್ಯಕ್ಕೆ ನೀರಾವರಿ ವಿಷಯದಲ್ಲಿ ಆಗಿರುವ ಅನ್ಯಾಯ ಸರಿ ಹೋಗಬೇಕು. ನಾನು ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ಅಷ್ಟರಲ್ಲಿ ಈ ನೀರಿನ ಸಮಸ್ಯೆ ಬಗೆಹರಿಸಬೇಕು ಎನ್ನುವ ಛಲವಿದೆ, ಬಗೆಹರಿಸುತ್ತೇನೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ನಾನು ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಭಾವುಕರಾಗಿ ಹೇಳಿದರು.

ಅನ್ಯಾಯ ಸರಿ ಮಾಡಬೇಕಿದೆ:

ಕಾವೇರಿ, ಕಳಸಾ ಬಂಡೂರಿ ಯೋಜನೆಗಳಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯ ಆಗಿದೆ. ಈಗ ಗೋದಾವರಿ – ಕಾವೇರಿ ಜೋಡಣೆ ಯೋಜನೆಯಲ್ಲಿಯೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ನಾವು ದನಿಯೆತ್ತಬೇಕಿದೆ. ಕಳಸಾ ಬಂಡೂರಿ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಆದರೆ, ಈ ವಿವಾದ ಸುಪ್ರೀಂ ಕೋರ್ಟಿನಲ್ಲಿದೆ. ಹೀಗಾಗಿ ಪ್ರಧಾನಿಗಳು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ವಕೀಲರು ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿ ಗೆಲ್ಲಬೇಕು. ರಾಜ್ಯ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಸಿಕ್ಕಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು; ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಮೊದಲು ಬಿಡುಗಡೆ ಮಾಡಲಿ. ರಾಜ್ಯ ಸರ್ಕಾರ ಅನೇಕ ನೀರಾವರಿ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ, ಹಣ ಕೊಡಲು ಸಾಧ್ಯವಾಗಿಲ್ಲ. ಅವರು ಮೊದಲು ಆ ಕೆಲಸ ಮಾಡಲಿ ಎಂದು ಎಂದು ತಿರುಗೇಟು ನೀಡಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ಸಂಸದ ಮಲ್ಲೇಶ್ ಬಾಬು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಕೆ.ಎ.ತಿಪ್ಪೇಸ್ವಾಮಿ, ಜವರಾಯಿ ಗೌಡ, ಮಾಜಿ ಶಾಸಕ ಇ.ಕೃಷ್ಣಪ್ಪ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments