Wednesday, August 12, 2026
Google search engine
Homeರಾಜ್ಯಸಿಎಂ ಡಿಕೆ ನೇತೃತ್ವದಲ್ಲಿ ಮೊದಲ ಅಧಿವೇಶನ: ಬರ, ಬಿಡದಿ, ಕಾವೇರಿ ಸವಾಲು ಎದುರಿಸಲು ಸಜ್ಜು

ಸಿಎಂ ಡಿಕೆ ನೇತೃತ್ವದಲ್ಲಿ ಮೊದಲ ಅಧಿವೇಶನ: ಬರ, ಬಿಡದಿ, ಕಾವೇರಿ ಸವಾಲು ಎದುರಿಸಲು ಸಜ್ಜು

ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ವಿಧಾನಸಭೆ ಅಧಿವೇಶನ ಗುರುವಾರದಿಂದ 10 ದಿನಗಳ ಕಾಲ ನಡೆಯಲಿದ್ದು, ಹಲವಾರು ಪ್ರಮುಖ ವಿಷಯಗಳ ಕುರಿತು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುವ ಸಾಧ್ಯೆ ಇದೆ.

ವಿಧಾನ ಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನದಲ್ಲಿ ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ, ಕೆಲವೆಡೆ ಉಂಟಾಗಿರುವ ಅತಿವೃಷ್ಟಿ, ಬಿಡದಿ ಉಪನಗರ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ, ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿಚಾರ, ಬಿಎಂಐಸಿ ಯೋಜನೆ, ನೈಸ್‌‍ ಸಂಸ್ಥೆಯಿಂದ ನಿಯಮ ಬಾಹಿರ ಟೋಲ್‌ ಸಂಗ್ರಹ, ನಾಗೇಂದ್ರಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಸಚಿವ ಸಂಪುಟ ವಿಸ್ತರಣೆ ಗೊಂದಲ, ಆಡಳಿತ ಯಂತ್ರ ಕುಸಿತ ಸೇರಿದಂತೆ ಹಲವು ವಿಚಾರಗಳು ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪಗೊಂಡು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪ ತಾರಕಕ್ಕೇರುವ ಸಾಧ್ಯತೆಗಳಿವೆ.

ರಾಜ್ಯ ಸರ್ಕಾರ ಹಾಗೂ ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌‍ ಸಜ್ಜಾಗಿವೆ. ಅದೇ ರೀತಿ ಸರ್ಕಾರದ ಸಮರ್ಥನೆಗೆ ಕಾಂಗ್ರೆಸ್‌‍ ಪಕ್ಷವೂ ಕೂಡ ಸಿದ್ಧತೆ ನಡೆಸಿದೆ. ವಾಲೀಕಿ ಅಭಿವೃದ್ಧಿ ನಿಗಮದ ಹಣದ ಅವ್ಯವಹಾರದ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ಪ್ರತಿಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಂಪುಟದಿಂದ ಕೈಬಿಡುವಂತೆ ಆಗ್ರಹಿಸುತ್ತಿದೆ. ಈ ವಿಚಾರವನ್ನು ಸದನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವುದಾಗಿ ಪ್ರಕಟಿಸಿದೆ.

ಗುರುವಾರದಿಂದ ಆ.27ರವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಚಿವಾಲಯಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಇಂದು ಸಹ ವಿಧಾನಸೌಧದ ಸಿದ್ಧತಾ ಕಾರ್ಯ ಭರದಿಂದ ಸಾಗಿತ್ತು.

ನಿರೀಕ್ಷೆಯಂತೆ ಮೊದಲ ದಿನವಾದ ಗುರುವಾರ ಆರಂಭದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅನಂತರ ಸರ್ಕಾರದ ಅಧಿಕೃತ ಕಾರ್ಯಕಲಾಪಗಳು ನಡೆಯಲಿವೆ. ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿ ಬರಪರಿಹಾರ ನೀಡುತ್ತಿಲ್ಲ. ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು, ಈ ವಿಚಾರದಲ್ಲಿ ಪಕ್ಷ ಭೇದ ಮರೆತು ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಬಿಡದಿ ಉಪನಗರ ಯೋಜನೆ ವಿಚಾರದಲ್ಲಿ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟಿಸುತ್ತಿರುವ ವಿರೋಧ ಪಕ್ಷಗಳು ಪ್ರಮುಖವಾಗಿ ಈ ವಿಷಯ ಪ್ರಸ್ತಾಪಿಸಲಿವೆ. ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ಕಾವೇರಿದ ದನಿಯಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಸಂಕಷ್ಟ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡಲು ಆದೇಶ ನೀಡಿರುವ ವಿಚಾರವೂ ಪ್ರತಿಧ್ವನಿಸಲಿದ್ದು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹ ಕೇಳಿಬರಲಿದೆ.

ಸಂಪುಟ ವಿಸ್ತರಣೆ ಬೆನ್ನಲ್ಲೆ ಕಾಂಗ್ರೆಸ್‌‍ನಲ್ಲಿ ಉಂಟಾಗಿರುವ ಅಸಮಾಧಾನ, ಖಾತೆ ಹಂಚಿಕೆ ವಿಳಂಬದ ವಿಚಾರವೂ ಸಂದರ್ಭೋಚಿತವಾಗಿ ಪ್ರಸ್ತಾಪವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಗ್ಯಾರಂಟಿ ಸವಲತ್ತುಗಳು ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪದಿರುವುದು, ಅಭವೃದ್ಧಿ ಕಾರ್ಯಗಳಿಗೆ ಅನುದಾನ ನೀಡದ ಆರೋಪ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸೇರಿಂತೆ ನಾಡು ಎದುರಿಸುತ್ತಿರುವ ಹತ್ತು ಹಲವು ಜ್ವಲಂತ ಸಮಸ್ಯೆಗಳ ಮೇಲೆ ಶಾಸಕರು ಬೆಳಕು ಚೆಲ್ಲಿ ಸರ್ಕಾರದಿಂದ ಸೂಕ್ತ ಉತ್ತರ ಪಡೆಯುವ ಸಾಧ್ಯತೆಗಳಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments