ಮುಂಬೈ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ ನೀಡಿದ್ದಾರೆ. ತಮ್ಮ ಹಾಲಿ ಅಧಿಕಾರಾವಧಿ 2027ರ ಫೆಬ್ರವರಿ 20ರಂದು ಕೊನೆಗೊಂಡ ಬಳಿಕ ಮರುನೇಮಕ ಬಯಸುವುದಿಲ್ಲ ಎಂದು ಬುಧವಾರ ತಿಳಿಸಿದ್ದಾರೆ.
180 ಬಿಲಿಯನ್ ಡಾಲರ್ ಮೌಲ್ಯದ ಟಾಟಾ ಸಮೂಹದ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್ ಆಗಸ್ಟ್ 18ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಸಿದ್ಧವಾಗಿದೆ. ಇದೇ ವೇಳೆ, ಟ್ರಸ್ಟ್‌ಗಳು ತಮ್ಮ ಮೂರನೇ ಮಂಡಳಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ವಿಚಾರದಲ್ಲಿ ಅನಿಶ್ಚಿತತೆ ಮುಂದುವರಿದಿದೆ.
ಸದಸ್ಯರು ನಿಯಂತ್ರಕ ನಿರ್ಬಂಧಗಳನ್ನು ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ, ಚಂದ್ರಶೇಖರನ್ ಅವರನ್ನು ನಿರ್ದೇಶಕರಾಗಿ ಮರುನೇಮಕ ಮಾಡುವುದು ಅಸಾಧ್ಯವಾಗಿತ್ತು. ಕಂಪನಿಯ ಬೈಲಾಗಳ ಪ್ರಕಾರ, ಎಲ್ಲ ನೇಮಕಾತಿಗಳಿಗೂ ಸರ್ವಾನುಮತದ ಒಪ್ಪಿಗೆ ಅಗತ್ಯವಾಗಿದೆ.
ಇಂದು ಬಿಡುಗಡೆ ಮಾಡಿದ ಸಾರ್ವಜನಿಕ ಹೇಳಿಕೆಯಲ್ಲಿ ಚಂದ್ರಶೇಖರನ್, ಆರು ತಿಂಗಳು ಕಳೆದರೂ ನನ್ನ ಮರುನೇಮಕದ ಪ್ರಸ್ತಾವನೆ ಮುಂದುವರಿಯಲಿಲ್ಲ. ಮಂಡಳಿಯ ಒಬ್ಬ ಸದಸ್ಯರು ಪ್ರಸ್ತಾವನೆಯನ್ನು ವಿರೋಧಿಸಿದ್ದರಿಂದ, 2027ರ ಫೆಬ್ರವರಿ 20ರಂದು ನನ್ನ ಅಧಿಕಾರಾವಧಿ ಮುಕ್ತಾಯಗೊಂಡಾಗ ಮರುನೇಮಕಕ್ಕೆ ನನ್ನನ್ನು ಪರಿಗಣಿಸಿಕೊಳ್ಳಲು ನಾನು ಮುಂದಾಗದಿರಲು ನಿರ್ಧರಿಸಿದ್ದೇನೆ. ಉತ್ತರಾಧಿಕಾರಿ ಅಧ್ಯಕ್ಷರನ್ನು ಇಂದೇ ಬೆಳಗ್ಗೆ ಆಯ್ಕೆ ಮಾಡುವಂತೆ ಟಾಟಾ ಸನ್ಸ್ ಮಂಡಳಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.



