ಶಿಸ್ತಿನ ದಾಳಿ ಹಾಗೂ ಯೋಜಿತ ಕಾರ್ಯತಂತ್ರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 147 ರನ್ ಗಳಿಗೆ ಕಟ್ಟಿಹಾಕಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟಾನ್ಸ್ 19.3 ಓವರ್ ಗಳಲ್ಲಿ 147 ರನ್ ಗೆ ಆಲೌಟಾಯಿತು.
ಆರ್ ಸಿಬಿ ದಾಳಿಗೆ ತತ್ತರಿಸಿದ ಗುಜರಾತ್ 19 ರನ್ ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ನಂತರ ಶಾರೂಖ್ ಖಾನ್ ಮತ್ತು ಡೇವಿಡ್ ಮಿಲ್ಲರ್ 61 ರನ್ ಜೊತೆಯಾಟ ನಿಭಾಯಿಸಿ ಚೇತರಿಕೆ ನೀಡಿದರು.
ಶಾರೂಖ್ ಖಾನ್ (37), ಡೇವಿಡ್ ಮಿಲ್ಲರ್ (30) ಮತ್ತು ರಾಹುಲ್ ತೇವಾಟಿಯಾ (35) ಮತ್ತು ರಶೀದ್ ಖಾನ್ (18) ಮಾತ್ರ ಸ್ವಲ್ಪ ಮಟ್ಟಿಗೆ ಹೋರಾಟ ನಡೆಸಿದರು.
ಆರ್ ಸಿಬಿ ಪರ ಮೊಹಮದ್ ಸಿರಾಜ್, ಯಶ್ ದಯಾಲ್ ಮತ್ತು ವಿಜಯಕುಮಾರ್ ವೈಶಾಖ್ ತಲಾ 2 ವಿಕೆಟ್ ಪಡೆದು ಮಿಂಚಿದರು.