ಐಪಿಎಲ್ ಟಿ-20 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಪ್ಲೇಆಫ್ ನಲ್ಲಿ ಯಾವ ತಂಡಗಳು ಸ್ಥಾನ ಪಡೆಯುತ್ತವೆ ಎಂಬ ಕುತೂಹಲ ಹೆಚ್ಚಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊನೆಯ ಲೀಗ್ ಪಂದ್ಯದ ಬಗ್ಗೆ ಈಗ ಎಲ್ಲೆಲ್ಲೂ ಚರ್ಚೆ ನಡೆದಿದೆ.
ಹೌದು, ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಆರ್ ಸಿಬಿ ಇದೀಗ ಸತತ 5 ಪಂದ್ಯಗಳ ಗೆಲುವಿನೊಂದಿಗೆ 12 ಅಂಕದೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿದೆ. ಮೇ 18ರಂದು ನಡೆಯುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಹಾಗೂ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಚೆನ್ನೈ 14 ಅಂಕದೊಂದಿಗೆ 3ನೇ ಸ್ಥಾನದಲ್ಲಿದ್ದು, ಈ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ.
ವಿಶೇಷ ಅಂದರೆ ಆರ್ ಸಿಬಿ ಪಾಲಿಗೆ ಸಂಖ್ಯೆ 18 ಅದೃಷ್ಟ ತರುವುದೇ ಎಂಬ ಚರ್ಚೆ ನಡೆದಿದೆ. ಇದಕ್ಕೆ ಕಾರಣ ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಜೆರ್ಸಿ ಸಂಖ್ಯೆ 18. ಆರ್ ಸಿಬಿ ಪ್ಲೇಆಫ್ ಗೆ ಅರ್ಹತೆ ಪಡೆಯಬೇಕಾದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರನ್ ಚೇಸ್ ಮಾಡಿದರೆ 18.1 ಓವರ್ ಗಳಲ್ಲಿ ಗೆಲ್ಲಬೇಕಿದೆ. ಮೊದಲು ಬ್ಯಾಟ್ ಮಾಡಿದರೆ 18 ರನ್ ಗಳಿಂದ ಗೆಲ್ಲಬೇಕಿದೆ.
ಆರ್ ಸಿಬಿಗೆ ಮತ್ತೊಂದು ವಿಶೇಷ ಅಂದರೆ ಮೇ 18ರಂದು ಆಡಿದ ಪಂದ್ಯಗಳಲ್ಲಿ ಇದುವರೆಗೆ ಆರ್ ಸಿಬಿ ಸೋತೇ ಇಲ್ಲ. 2013ರಿಂದ ಇಲ್ಲಿಯವರೆಗೆ ಆರ್ ಸಿಬಿ 4 ಬಾರಿ ಮೇ 18ರಂದು ಆಡಿದ್ದು ಎಲ್ಲದರಲ್ಲೂ ಗೆಲುವು ಕಂಡಿದೆ.
ಮೇ 18ರಂದು ಆಡಿದ 4 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 2 ಬಾರಿ ಶತಕ ಬಾರಿಸಿದ್ದು, ಆ ಎರಡೂ ಪಂದ್ಯಗಳನ್ನೂ ಆರ್ ಸಿಬಿ ಭರ್ಜರಿ ಗೆಲುವು ಕಂಡಿದೆ.
ಆರ್ ಸಿಬಿ 18ರ ಪಂದ್ಯಗಳು
2013 ಮೇ 8ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 24 ರನ್ ಗಳಿಂದ ಗೆದ್ದುಕೊಂಡಿದ್ದರೆ, ವಿರಾಟ್ ಕೊಹ್ಲಿ ಅಜೇಯ 56 ರನ್ ಸಿಡಿಸಿದ್ದರು.
2014 ಮೇ 18ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದ್ದು, ವಿರಾಟ್ ಕೊಹ್ಲಿ 27 ರನ್ ಗಳಿಸಿದ್ದರು.
2016 ಮೇ 18ರಂದು ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 82 ರನ್ ಗಳ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದು, ವಿರಾಟ್ ಕೊಹ್ಲಿ 113 ರನ್ ಸಿಡಿಸಿದ್ದರು.
2016, ಮೇ 18ರಂದು ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 8 ವಿಕೆಟ್ ಗಳ ಗೆಲುವು ಕಂಡಿದ್ದು, ವಿರಾಟ್ ಕೊಹ್ಲಿ 198 ರನ್ ಬಾರಿಸಿದ್ದರು.