ರಾಜ್ಯದಲ್ಲಿ ವಿವಿದೆಡೆ 50 ಪಾಕಿಸ್ತಾನಿಯರು ನೆಲೆಸಿರುವುದನ್ನು ಕರ್ನಾಟಕದ ಪೊಲೀಸರು ಪತ್ತೆ ಹಚ್ಚಿದ್ದು, ಇವರ ಗಡಿಪಾರಿಗೆ ಸಿದ್ಧತೆ ನಡೆದಿದೆ.
ಜಮ್ಮು ಕಾಶ್ಮೀರದ ಪಹಲ್ಗಾವ್ ನಲ್ಲಿ ಉಗ್ರರು 26 ಪ್ರವಾಸಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶದಲ್ಲಿರುವ ಪಾಕಿಸ್ತಾನಿಯರು ಏಪ್ರಿಲ್ 27ರೊಳಗೆ ದೇಶ ತೊರೆಯುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ನೆಲೆಸಿರುವ ಪಾಕಿಸ್ತಾನಿಯರನ್ನು ಪತ್ತೆಹಚ್ಚುವ ಕಾರ್ಯ ಆರಂಭಗೊಂಡಿದೆ.
ಬೆಂಗಳೂರು, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಪಾಕಿಸ್ತಾನಿಯರು ಇದ್ದಾರೆ ಎಂದು ಪತ್ತೆ ಹಚ್ಚಲಾಗಿದ್ದು, ಇವರ ವಿವರಗಳನ್ನು ಪೊಲೀಸರು ಗೌಪ್ಯವಾಗಿ ಇರಿಸಲಾಗಿದೆ.
ಭಟ್ಕಳದಲ್ಲಿ ಅತೀ ಹೆಚ್ಚು 14 ಪಾಕಿಸ್ತಾನಿಯರು ನೆಲೆಸಿದ್ದಾರೆ. ಇದರಲ್ಲಿ 10 ಮಂದಿ ಮಹಿಳೆಯರು ಪಾಕಿಸ್ತಾನಿಯರಾಗಿದ್ದು, ಮದುವೆ ಆಗಿ ನೆಲೆಸಿದ್ದಾರೆ. ಇವರಿಗೆ ಸೇರಿದ 4 ಮಕ್ಕಳು ಇದ್ದು, ಪ್ರತಿ 2 ವರ್ಷಕ್ಕೊಮ್ಮೆ ವೀಸಾ ನವೀಕರಿಸಿಕೊಂಡು ಕಳೆದ ಕೆಲವು ವರ್ಷಗಳಿಂದ ನೆಲೆಸಿದ್ದಾರೆ. ಮಂಗಳೂರಿನಲ್ಲಿ ಇಬ್ಬರು ಪಾಕಿಸ್ತಾನಿಯರು ನೆಲೆಸಿದ್ದಾರೆ ಎಂದು ಹೇಳಲಾಗಿದೆ.



