ರಾಯಚೂರು: ಮಂತ್ರಾಲಯದ ಸಂಬಂಧಿಕರ ಮನೆಯಲ್ಲಿನ ಸತ್ಯನಾರಾಯಣ ಪೂಜೆಗೆಂದು ಬಂದಿದ್ದ 5 ಮಂದಿ ಜಲಸಮಾಧಿ ಆದ ಘಟನೆ ತುಂಗಭದ್ರಾ ನದಿಯಲ್ಲಿ ಸಂಭವಿಸಿದೆ.
ಹೈದರಾಬಾದ್ ಮೂಲದ ಯುವನ ಚಂದ್ರ (5), ಸತೀಶ್ (35), ಮಂತ್ರಾಲಯ ಗ್ರಾಮದ ರಾಘವೇಂದ್ರ (25), ಧನುಷ್ (23) ಉರವಕೊಂಡದ ಸಂಧ್ಯಾ (22) ಮೃತಪಟ್ಟವರು. ಮತ್ತೋರ್ವ ಯುವತಿ ಅಪರ್ಣಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂತ್ರಾಲಯದ ಸಂಬಂಧಿಕರ ಮನೆಯಲ್ಲಿನ ಸತ್ಯನಾರಾಯಣ ಪೂಜೆಗೆಂದು ಬಂದಿದ್ದವರು, ಕಾರ್ಯಕ್ರಮದ ಬಳಿಕ ಈಜಲೆಂದು ತುಂಗಭದ್ರಾ ನದಿಗೆ ತೆರಳಿದ್ದರು. ಈ ವೇಳೆ ಕಾಲು ತೊಳೆಯಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ ಐವರು ಜಲಸಮಾಧಿಯಾಗಿದ್ದಾರೆ.
ಮೃತರ ಪೈಕಿ ರಾಘವೇಂದ್ರ, ಸಂಧ್ಯಾ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರು ಶವಗಳನ್ನು ಸ್ಥಳೀಯ ಮೀನುಗಾರರು ಹುಡುಕಾಟ ನಡೆಸಿ ಹೊರತೆಗಿದಿದ್ದಾರೆ.
ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂತ್ರಾಲಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಟ್ರ್ಯಾಕ್ಟರ್ ಪಲ್ಟಿ:
ಕಿರಿದಾದ ರಸ್ತೆಯಿಂದಾಗಿ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಮೇಲೆ ಬಿದ್ದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯರಗೇರಾ ಬಳಿಯ ಬಿಜನಗೇರಾ ಗ್ರಾಮದಲ್ಲಿ ನಡೆದಿದೆ.
ಈರಣ್ಣ ಗೌಡ (25) ಮೃತಪಟ್ಟವರು, ಜಮೀನಿನಲ್ಲಿ ಮಡಿಕೆ ಹೊಡೆದು ಮನೆಗೆ ಮರಳುತ್ತಿದ್ದ ವೇಳೆ ಕಿರಿದಾದ ರಸ್ತೆಯಿಂದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪಲ್ಟಿಯಾಗಿ ತಗ್ಗು ಪ್ರದೇಶಕ್ಕೆ ಉರುಳಿದ್ದು, ಸುಮಾರು 25 ಅಡಿ ಆಳಕ್ಕೆ ಬಿದ್ದಿದೆ.
ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ ಮತ್ತೋರ್ವ ಯುವಕ ಸಾವನ್ನಪ್ಪಿದ್ದಾನೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



