Friday, July 17, 2026
Google search engine
Homeರಾಜ್ಯಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಯುವಜನೋತ್ಸವ ಆಯೋಜನೆ

ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಯುವಜನೋತ್ಸವ ಆಯೋಜನೆ

ಬೆಂಗಳೂರು: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ಕ್ರೀಡಾ ಮೂಲಸೌಕರ್ಯ, ಕ್ರೀಡಾಪಟುಗಳ ಕಲ್ಯಾಣ ಹಾಗೂ ಪ್ರೋತ್ಸಾಹ ಧನ ವಿತರಣೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ.

ಗ್ರಾಮೀಣ ಕ್ರೀಡೆಗಳಿಗೆ ಜಾಗತಿಕ ಮನ್ನಣೆ ನೀಡುವುದರಿಂದ ಹಿಡಿದು ಒಲಿಂಪಿಕ್ಸ್ ಪದಕ ಬೇಟೆಯವರೆಗೆ ಇಲಾಖೆಯು ಹತ್ತಾರು ಕ್ರಾಂತಿಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು.

ಇಂದು ಯವನಿಕ ಸಭಾಂಗಣದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ನಾನು ರಾಜ್ಯದ ನೂತನ ಸರ್ಕಾರದಲ್ಲಿ ಕಂದಾಯ, ಮುಜರಾಯಿ ಹಾಗೂ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಇಂದು ತಮ್ಮ ಮೊದಲ ಅಧಿಕೃತ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದ ಅವರು, ರಾಜ್ಯದ ಯುವಜನತೆಯನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಮತ್ತು ಕ್ರೀಡಾ ಕ್ಷೇತ್ರಕ್ಕೆ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ರೂಪಿಸಿರುವ ಹತ್ತಾರು ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ತಿಳಿಸಿದರು.

ಕಂಠೀರವ ಕ್ರೀಡಾಂಗಣದ ಪುನರಾಭಿವೃದ್ಧಿ:

ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಪಿಪಿಪಿ (PPP) ಮಾದರಿಯಲ್ಲಿ ಸುಮಾರು 5,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ಶೀಘ್ರದಲ್ಲೇ ಸಂಪುಟದ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ‘ಅಂತರರಾಷ್ಟ್ರೀಯ ಯುವಜನೋತ್ಸವ’:

ಬರುವ ಡಿಸೆಂಬರ್, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಅದ್ಧೂರಿಯಾಗಿ “ಅಂತರರಾಷ್ಟ್ರೀಯ ಯುವಜನೋತ್ಸವ” (International Youth Festival) ಆಯೋಜಿಸಲು ಮುಖ್ಯಮಂತ್ರಿಗಳ ಒಪ್ಪಿಗೆ ದೊರೆತಿದೆ. ವಿವಿಧ ದೇಶಗಳ ಯುವಜನರು ಇದರಲ್ಲಿ ಭಾಗವಹಿಸಲಿದ್ದು, ನಮ್ಮ ಸಂಸ್ಕøತಿ, ಕ್ರೀಡೆ ಮತ್ತು ವಿಚಾರಧಾರೆಗಳ ವಿನಿಮಯಕ್ಕೆ ಇದು ಸಾಕ್ಷಿಯಾಗಲಿದೆ ಎಂದು ತಿಳಿಸಿದರು.

ಯುವಶಕ್ತಿಯ ಸಬಲೀಕರಣ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ:

ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 65 ರಷ್ಟು ಜನರು 35 ವರ್ಷದೊಳಗಿನ ಯುವಕರಾಗಿದ್ದಾರೆ. ಇವರೆಲ್ಲರೂ ಪದವಿ ಪಡೆಯುವ ಹೊತ್ತಿಗೆ ಜವಾಬ್ದಾರಿಯುತ ಮತದಾರರಾಗಿರುತ್ತಾರೆ. ಈ ಯುವಶಕ್ತಿ ದಾರಿ ತಪ್ಪದಂತೆ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡಲು ಕ್ರೀಡಾ ಇಲಾಖೆಯು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಹಾಜರಾತಿಯಲ್ಲಿ ವಿನಾಯಿತಿ: ಪದವಿ ಮತ್ತು ಡಿಪ್ಲೊಮಾ ಕಲಿಯುತ್ತಿರುವ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಶೇ. 15 ರಷ್ಟು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಶೇ. 25 ರಷ್ಟು ಕಾಲೇಜು ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗುವುದು.

ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ: ಸರ್ಕಾರವು ನೇಮಕಾತಿ ಮಾಡಿಕೊಳ್ಳಲಿರುವ ಸುಮಾರು 72,000 ಹುದ್ದೆಗಳಲ್ಲಿ ಶೇ. 2 ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲಾಗಿದೆ. ಇಲಾಖಾವಾರು ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಈ ಮೀಸಲಾತಿ ಸಿಗಲಿದ್ದು, ಪೆÇಲೀಸ್ ಇಲಾಖೆಯಲ್ಲಿ ಈಗಾಗಲೇ ಶೇ. 3 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಇತ್ತೀಚೆಗಷ್ಟೇ ಸುನಿಲ್ (ಹಾಕಿ), ನಿಕಿನ್ ಹಾಗೂ ದಿವ್ಯಾ ಅವರಿಗೆ ಈ ಯೋಜನೆಯಡಿ ನೇಮಕಾತಿ ಆದೇಶ ನೀಡಲಾಗಿದೆ.

ಪ್ರೋತ್ಸಾಹ ಧನ ಹೆಚ್ಚಳ : ಕಾಮನ್‍ವೆಲ್ತ್ ಮತ್ತು ಏಷ್ಯನ್ ಗೇಮ್ಸ್‍ನಲ್ಲಿ ಪದಕ ವಿಜೇತರಿಗೆ ನೀಡಲಾಗುವ ನಗದು ಬಹುಮಾನದ (ಚಿನ್ನಕ್ಕೆ 35 ಲಕ್ಷ ರೂ., ಬೆಳ್ಳಿಗೆ 25 ಲಕ್ಷ ರೂ., ಕಂಚಿಗೆ 15 ಲಕ್ಷ ರೂ.) ಜೊತೆಗೆ, ಇನ್ನು ಮುಂದೆ ಕೇವಲ ದೇಶವನ್ನು ಪ್ರತಿನಿಧಿಸುವ ರಾಜ್ಯದ ಪ್ರತಿಯೊಬ್ಬ ಕ್ರೀಡಾಪಟುಗೂ ತಲಾ 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಹೊಸ ಯೋಜನೆಯಡಿ ನೀಡಲಾಗುವುದು ಎಂದು ತಿಳಿಸಿದರು.

ತರಬೇತುದಾರರ ನೇಮಕ: ಕ್ರೀಡಾಕೂಟಗಳಿಗೆ ತರಬೇತುದಾರರ ಕೊರತೆಯನ್ನು ನೀಗಿಸಲು ರಾಜ್ಯಾದ್ಯಂತ ಶೀಘ್ರದಲ್ಲೇ 50 ಕ್ರೀಡಾ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ.

ಏಕಲವ್ಯ ಹಾಗೂ ಕ್ರೀಡಾ ಪ್ರಶಸ್ತಿ ಪ್ರದಾನ: ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿರುವ ಏಕಲವ್ಯ ಕ್ರೀಡಾರತ್ನ, ಕ್ರೀಡಾ ಪೋಷಕ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಬರುವ ಆಗಸ್ಟ್ 29 ರಂದು (ಹಾಕಿ ಜಾದೂಗಾರ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನಾಚರಣೆ) ಪ್ರದಾನ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ.

ಮೈಸೂರಿನಲ್ಲಿ ವೆಲೋಡ್ರೋಮ್ ನಿರ್ಮಾಣ: ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು ಮೈಸೂರಿನಲ್ಲಿ 17 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಬಜೆಟ್‍ನಲ್ಲಿ ಘೋಷಿಸಿದಂತೆ ವೆಲೋಡ್ರೋಮ್ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ. ಬಿಜಾಪುರ, ಬಾಗಲಕೋಟೆ ಮತ್ತು ಗದಗ ಭಾಗದ ಕ್ರೀಡಾಪಟುಗಳಿಗೆ ಈಗಾಗಲೇ ಸೈಕಲ್‍ಗಳನ್ನು ವಿತರಿಸಲಾಗಿದೆ.

ಸಿಇಟಿ ಮೀಸಲಾತಿ: ಪ್ರಸ್ತುತ ವರ್ಷ ಕ್ರೀಡಾ ಕೋಟಾದಡಿ ಸುಮಾರು 115 ಕ್ರೀಡಾಪಟು ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments