Friday, July 17, 2026
Google search engine
Homeರಾಜ್ಯಕರೆಂಟ್, ನೀರು ಮಿತವ್ಯಯಕ್ಕೆ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶ

ಕರೆಂಟ್, ನೀರು ಮಿತವ್ಯಯಕ್ಕೆ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸರ್ಕಾರದ ಸಚಿವಾಲಯದ ಎಲ್ಲಾ ಕಛೇರಿಗಳಲ್ಲಿ ನೀರು ಮತ್ತು ವಿದ್ಯುತ್‌ ಅನ್ನು ಕಟ್ಟುನಿಟ್ಟಾಗಿ ಮಿತಬಳಕೆ ಮಾಡಲು ಹಾಗೂ ಅನಗತ್ಯ ಪೋಲಾಗುವುದನ್ನು ತಡೆಗಟ್ಟಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

​ಇತ್ತೀಚಿನ ದಿನಗಳಲ್ಲಿ ಕಚೇರಿ ಸಮಯ ಮುಗಿದ ನಂತರವೂ ವಿದ್ಯುತ್ ದೀಪ, ಫ್ಯಾನ್, ಕಂಪ್ಯೂಟರ್ ಹಾಗೂ ಹವಾನಿಯಂತ್ರಣ (AC) ಸಾಧನಗಳನ್ನು ಆಫ್ ಮಾಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ತಡೆಯಲು ಈ ಕೆಳಗಿನ ಪ್ರಮುಖ ಕ್ರಮಗಳನ್ನು ತಕ್ಷಣದಿಂದಲೇ ಜಾರಿಗೆ ತರಲು ಆದೇಶಿಸಲಾಗಿದೆ:

​ಪ್ರಮುಖ ನಿರ್ದೇಶನಗಳು ಮತ್ತು ನಿಯಮಗಳು:

ನೈಸರ್ಗಿಕ ಬೆಳಕಿನ ಬಳಕೆ : ಸಚಿವಾಲಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕ ಬೆಳಕನ್ನು ಬಳಸಬೇಕು. ಕಚೇರಿಗಳ ಕಿಟಕಿಗಳನ್ನು ಪೂರ್ತಿ ತೆರೆದಿಟ್ಟು, ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್‌ಗಳನ್ನು ಆನ್ ಮಾಡಬೇಕು.

ಸಂಜೆ 6ರ ನಂತರ ಕಠಿಣ ನಿಗಾ : ಪ್ರತಿ ಮಹಡಿಯ ಕಾವಲುಗಾರರು ಮತ್ತು ಭದ್ರತಾ ಸಿಬ್ಬಂದಿಗಳು ಸಂಜೆ 6.00 ಗಂಟೆಯ ನಂತರ ಅನಗತ್ಯ ವಿದ್ಯುತ್ ದೀಪಗಳನ್ನು ನಂದಿಸಲಾಗಿದೆಯೇ ಹಾಗೂ ಬೆಳಿಗ್ಗೆ 6.00 ಗಂಟೆಗೆ ಆಫ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.

ಸ್ವಿಚ್-ಆಫ್ ಕಡ್ಡಾಯ : ಸಚಿವರು ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಹಾಗೂ ಕಚೇರಿ ವೇಳೆ ಮುಕ್ತಾಯವಾದ ನಂತರ ವಿದ್ಯುತ್ ಸಂಪರ್ಕದ ಎಲ್ಲಾ ಸ್ವಿಚ್‌ಗಳನ್ನು ಕಡ್ಡಾಯವಾಗಿ ಆಫ್ (Switch Off) ಮಾಡಬೇಕು. ಕಚೇರಿಗೆ ಬೀಗ ಹಾಕುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಪ್ತ ಕಾರ್ಯದರ್ಶಿಗಳು ಮತ್ತು ಭದ್ರತಾ ಸಿಬ್ಬಂದಿಯದ್ದಾಗಿರುತ್ತದೆ.

AC ತಾಪಮಾನ ನಿಯಂತ್ರಣ : ಅಧಿಕಾರಿಗಳ ಕಚೇರಿಗಳಲ್ಲಿನ ಏರ್ ಕಂಡಿಷನರ್‌ಗಳನ್ನು (AC) ಕಡ್ಡಾಯವಾಗಿ 24-26°C ತಾಪಮಾನದಲ್ಲೇ ಬಳಸಬೇಕು.

ತಂತ್ರಜ್ಞಾನದ ಅಳವಡಿಕೆ : ಸಾಂಪ್ರದಾಯಿಕ ದೀಪಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ (LED) ದೀಪಗಳನ್ನು ಅಳವಡಿಸುವುದು ಹಾಗೂ ಕಾರಿಡಾರ್‌ಗಳು, ವಿಶ್ರಾಂತಿ ಕೊಠಡಿಗಳು ಮತ್ತು ಸಭಾಂಗಣಗಳಲ್ಲಿ ಚಲನಶೀಲ ಸಂವೇದಕಗಳನ್ನು (Motion Sensors) ಅಳವಡಿಸಲು ಸೂಚಿಸಲಾಗಿದೆ.

ನೀರು ಪೋಲಾಗುವುದಕ್ಕೆ ಬ್ರೇಕ್ : ಶೌಚಾಲಯ ಹಾಗೂ ಕಚೇರಿಗಳಲ್ಲಿ ನಲ್ಲಿಗಳನ್ನು (Taps) ಕಡ್ಡಾಯವಾಗಿ ಬಂದ್ ಮಾಡಬೇಕು. ನೀರಿನ ಹರಿವು ಕಡಿಮೆ ಮಾಡಲು ವಾಟರ್ ಏರೇಟರ್‌ಗಳನ್ನು (Water Aerators) ಅಳವಡಿಸಲಾಗುವುದು. ನಲ್ಲಿಗಳಲ್ಲಿ ಸೋರಿಕೆಯಿದ್ದರೆ ತಕ್ಷಣ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಬೇಕು.

ಎಚ್ಚರಿಕೆಯ ಹಿನ್ನೆಲೆ:

​ಪ್ರಸ್ತುತ ಸಂಭವಿಸುತ್ತಿರುವ ಎಲ್‌ನೊನ್ ಹವಾಮಾನ ವೈಪರೀತ್ಯದಿಂದಾಗಿ ದೇಶದಲ್ಲಿ ಮಳೆಯ ಕೊರತೆ ಉಂಟಾಗುತ್ತಿದ್ದು, ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಮತ್ತು ನೀರಿನಂತಹ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲಗಳನ್ನು ಅಪವ್ಯಯ ಮಾಡದೆ ಮಿತವಾಗಿ ಬಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

​ಈ ಆದೇಶಗಳನ್ನು  ವಿಧಾನ ಸಭೆ, ವಿಧಾನ ಪರಿಷತ್ತಿನ ಸಚಿವಾಲಯದ ಎಲ್ಲಾ ಇಲಾಖೆಗಳು ಹಾಗೂ ಇತರ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮುಖ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments