Friday, July 17, 2026
Google search engine
Homeಕಾನೂನುಉಪಸಭಾಪತಿ ಬಿಜೆಪಿಯ ಪ್ರಾಣೇಶ್ ಸದಸ್ಯತ್ವ ರದ್ದು: ಗಾಯತ್ರಿ ವಾದಕ್ಕೆ ಸುಪ್ರೀಂ ಮನ್ನಣೆ

ಉಪಸಭಾಪತಿ ಬಿಜೆಪಿಯ ಪ್ರಾಣೇಶ್ ಸದಸ್ಯತ್ವ ರದ್ದು: ಗಾಯತ್ರಿ ವಾದಕ್ಕೆ ಸುಪ್ರೀಂ ಮನ್ನಣೆ

ನವದೆಹಲಿ: ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರ ಪರಿಷತ್ ಸದಸ್ಯತ್ವ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಇದರಿಂದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಎಂಎಲ್‌ಸಿ ಎಂ.ಕೆ. ಪ್ರಾಣೇಶ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ ಪ್ರಾಣೇಶ್​ ಅವರ ಸದಸ್ಯತ್ವವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರ ಕಾನೂನು ಹೋರಾಟಕ್ಕೆ ಅಂತಿಮವಾಗಿ ಜಯ ದೊರೆತಿದೆ.

ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದ  ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ ಮಲ್ಯ ಬಾಗ್ನಿ ಮತ್ತು ವಿಪುಲ್ ಎಂ.ಪಂಚೋಲಿ ಅವರನ್ನೊಳಗೊಂಡ ಪೀಠವು ಈ ತೀರ್ಪನ್ನು ನೀಡಿತು.
2021ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತಗಳ ಮರು ಎಣಿಕೆಗೆ ಆದೇಶಿಸಿದ್ದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಪ್ರಾಣೇಶ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಇದರಿಂದ ಅವರ ರಾಜಕೀಯ ನಡೆಗೆ ಕಾನೂನಾತ್ಮಕ ಹೊಡೆತ ಬಿದ್ದಿದೆ.

ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಎಂ.ಕೆ. ಪ್ರಾಣೇಶ್ ಕೇವಲ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಚುನಾವಣೆಯಲ್ಲಿ ನಾಮ ನಿರ್ದೇಶಿತ ಸದಸ್ಯರು ಮತ ಚಲಾಯಿಸಿರುವುದನ್ನು ಪ್ರಶ್ನಿಸಿ ಗಾಯತ್ರಿ ಶಾಂತೇಗೌಡ ಅವರು ಮೊದಲು ಹೈಕೋರ್ಟ್ ಹಾಗೂ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭಿಸಿದ್ದರು. ಹೈಕೋರ್ಟ್‌ನಲ್ಲಿ ಗಾಯತ್ರಿ ಪರ ತೀರ್ಪು ಬಂದಿದ್ದರೂ, ಅದನ್ನು ಪ್ರಶ್ನಿಸಿ ಪ್ರಾಣೇಶ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸುಮಾರು ಮೂರೂವರೆ ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಸುಪ್ರೀಂ ಕೋರ್ಟ್ ಗುರುವಾರ ಅಂತಿಮ ತೀರ್ಪು ಪ್ರಕಟಿಸಿ, ಗಾಯತ್ರಿ ಶಾಂತೇಗೌಡ ಅವರ ವಾದವನ್ನು ಪುರಸ್ಕರಿಸಿದೆ. ಪರಿಣಾಮವಾಗಿ ಎಂ.ಕೆ. ಪ್ರಾಣೇಶ್ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದಾಗಿದ್ದು, ಉಳಿದಿರುವ ಸುಮಾರು ಒಂದೂವರೆ ವರ್ಷಗಳ ಅವಧಿಗೆ ಗಾಯತ್ರಿ ಶಾಂತೇಗೌಡ ಅವರು ನೂತನ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಗಾಯತ್ರಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನುಸಿಂಫ್ಟಿ, ಪ್ರಾಣೇಶ್ ಆಯ್ಕೆಯಾಗಿ ನಾಲ್ಕು ವರ್ಷಗಳು ಈಗಾಗಲೇ ಕಳೆದಿವೆ. ಅವರು ಅಧಿಕಾರದ ಸುಖ ಅನುಭವಿಸುತ್ತಿದ್ದಾರೆ. ಇದು ಸರಿಯಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ (ಬಿಜೆಪಿ) ನಾಮನಿರ್ದೇಶನಗೊಂಡ ಸದಸ್ಯರು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲೂ ನಾಮನಿರ್ದೇಶಿತ ಸಂಸದರಿಗೆ ಮತದಾನದ ಹಕ್ಕು ಇಲ್ಲ. ಆದರೆ, ವಿಧಾನ ಪರಿಷತ್ ಚುನಾವಣೆಯಲ್ಲಿ ನಿಯಮಬಾಹಿರವಾಗಿ ಮತದಾನದ ಹಕ್ಕು ನೀಡಲಾಗಿದೆ ಎಂಬುದನ್ನು ಪೀಠದ ಗಮನಕ್ಕೆ ತಂದಿದ್ದರು.

ಪ್ರಾಣೇಶ್ ಪರ ವಾದ ಮಂಡಿಸಿದ್ದ ವಕೀಲರು, ಪರಿಷತ್‌ ಚುನಾವಣೆಯ ಫಲಿತಾಂಶ ಪ್ರಕಟವಾಗುವ ವರೆಗೆ ಎದುರಾಳಿ ಅಭ್ಯರ್ಥಿ ಯಾವುದೇ ತಕರಾರು ಎತ್ತಿರಲಿಲ್ಲ. ಮತದಾರರ ಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದರೆ ಕೂಡಲೇ ಆಕ್ಷೇಪಣೆ ಸಲ್ಲಿಸಬೇಕಿತ್ತು. ಚುನಾವಣೆಯಲ್ಲಿ ಸೋತ ಬಳಿಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ಈ ಎಲ್ಲ ಅಂಶಗಳನ್ನು ಪರಿಗಣಿಸದೆಯೇ ತೀರ್ಪು ನೀಡಿದೆ ಎಂದರು.

ಚುನಾವಣಾ ಆಯೋಗದ ಪರ ವಕೀಲರು, ಹೈಕೋರ್ಟ್ ತೀರ್ಪು ನೀಡಿದ ಬಳಿಕ ನಾಮನಿರ್ದೇಶಿತ ಸದಸ್ಯರಿಗೆ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡಿಲ್ಲ. ಈ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲನವಿಯನ್ನೂ ಸಲ್ಲಿಸಿಲ್ಲ. ನ್ಯಾಯಾಲಯದ ತೀರ್ಪನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.

ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನಪರಿಷತ್‌ ಸ್ಥಾನಕ್ಕೆ 2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಚಲಾವಣೆಯಾಗಿದ್ದ 2,410 ಮತಗಳ ಪೈಕಿ 39 ಮತಗಳು ಅಸಿಂಧುವಾಗಿದ್ದವು. ಪ್ರಾಣೇಶ್ 1,188 ಮತಗಳನ್ನು ಪಡೆದಿದ್ದರು. ಗಾಯತ್ರಿ ಶಾಂತೇಗೌಡ ಅವರು 1,182 ಮತಗಳನ್ನ ಗಳಿಸಿದ್ದರು. ಪ್ರಾಣೇಶ್ ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments