ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) 120ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ಹಾಗೂ ತಾಂತ್ರಿಕ ತಜ್ಞರು ರಾಜೀನಾಮೆ ಸಲ್ಲಿಸಿದ್ದಾರೆ.
ಇಸ್ರೊ ಇತಿಹಾಸದಲ್ಲೇ ಇದೇ ಮೊದಲ ಬಾರಿ ಒಂದೇ ವರ್ಷದಲ್ಲಿ 100ಕ್ಕೂ ಅಧಿಕ ವಿಜ್ಞಾನಿಗಳು ಹಾಗೂ ತಂತ್ರಜ್ಞನರು ರಾಜೀನಾಮೆ ನೀಡಿದ್ದಾರೆ. ಇದರಿಂದ ಗಗನಯಾನ, ಚಂದ್ರಯಾನ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಹಿನ್ನಡೆ ಆಗುವ ಭೀತಿ ಎದುರಾಗಿದೆ.
ಕಳೆದ ಒಂದು ವರ್ಷದಲ್ಲಿ ಒಟ್ಟು 120ಕ್ಕೂ ಹೆಚ್ಚು ತಜ್ಞರು ರಾಜೀನಾಮೆ ನೀಡಿದ್ದು, ಇದರಲ್ಲಿ ಗಗನಯಾನ, ಚಂದ್ರಯಾನ-3 ಹಾಗೂ ಸ್ಪೇಡೆಕ್ಸ್ ಯೋಜನೆಗಳ ಪ್ರಮುಖ ವಿಜ್ಞಾನಿಗಳೂ ಸೇರಿರುವುದು ಕಳವಳಕ್ಕೆ ಕಾರಣವಾಗಿದೆ.
ಖಾಸಗಿ ಬಾಹ್ಯಾಕಾಶ ವಲಯದಲ್ಲಿ ಸೃಷ್ಟಿಯಾಗಿರುವ ಭಾರಿ ಬೇಡಿಕೆ ಹಾಗೂ ಆಕರ್ಷಕ ವೇತನದ ಆಮಿಷಕ್ಕೆ ಒಳಗಾಗಿ ತಜ್ಞರು ಸಂಸ್ಥೆ ತೊರೆಯುತ್ತಿದ್ದಾರೆ. ಇದರಿಂದ ಇಸ್ರೋ ಪ್ರತಿಭೆಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ವರದಿ ಆಗಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಬಾಹ್ಯಾಕಾಶ ಇಲಾಖೆ (ಡಿಒಎಸ್) ವಿಜ್ಞಾನಿಗಳ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ (ವಿಆರ್‌ಎಸ್) ನಿಯಮಗಳನ್ನು ಬಿಗಿಗೊಳಿಸಿ ಜುಲೈ 14ರಂದು ಮಹತ್ವದ ಆಂತರಿಕ ಆದೇಶ ಹೊರಡಿಸಿದೆ.
ಮಾನವಸಹಿತ ಬಾಹ್ಯಾಕಾಶ ‘ಗಗನಯಾನ’ದಂತಹ ದೇಶದ ಹೆಮ್ಮೆಯ ಯೋಜನೆಗಳಿಗೆ ಯಾವುದೇ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಇಸ್ರೋದ ಪ್ರಮುಖ ಕೇಂದ್ರಗಳಾದ ಬೆಂಗಳೂರಿನ ‘ಯು.ಆರ್. ರಾವ್ ಉಪಗ್ರಹ ಕೇಂದ್ರ’ದಿಂದ (ಯುಆರ್‌ಎಸ್‌ಸಿ) ಸುಮಾರು 80 ಹಾಗೂ ತಿರುವನಂತಪುರದ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಿಂದ (ವಿಎಸ್‌ಎಸ್‌ಸಿ) ಕನಿಷ್ಠ 20 ಹಿರಿಯ ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ ಎಂದು ವರದಿ ಹೇಳಿದೆ.
ಕೇಂದ್ರಕ್ಕೆ ಪತ್ರ
ಸಂಸ್ಥೆಯ ಪ್ರಮುಖ ಹಾಗೂ ಕ್ಲಿಷ್ಟ ಯೋಜನೆಗಳಲ್ಲಿ ಪಾಲ್ಗೊಂಡಿದ್ದ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಾಜೀನಾಮೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಸ್ರೊ ಪ್ರಧಾನ ಕಾರ್ಯದರ್ಶಿ ಎಸ್.ಆರ್. ರಾಜೇಶೇಖರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೇ ದೇಶದ ಹಿತಾಸಕ್ತಿ ಗಮನಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ವಿಜ್ಞಾನಿಗಳಿಗೆ ಮನವಿ ಮಾಡಿದ್ದಾರೆ.



