Saturday, October 17, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಮಿಸ್ ದಿವಾ ಕಾಸ್ಮೊ 2025 ಅವನಿ ಕೇಕೆಕೊಚ್ಚಿರಿಂದ ರಿಗ್ಯಾಸ್ ಲೋಕಾರ್ಪಣೆ

ಬೆಂಗಳೂರಿನಲ್ಲಿ ಮಿಸ್ ದಿವಾ ಕಾಸ್ಮೊ 2025 ಅವನಿ ಕೇಕೆಕೊಚ್ಚಿರಿಂದ ರಿಗ್ಯಾಸ್ ಲೋಕಾರ್ಪಣೆ

ಬೆಂಗಳೂರು: ಮಿಸ್ ಕಾಸ್ಮೊ 2026ರಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮಿಸ್ ದಿವಾ ಕಾಸ್ಮೊ 2025 ಅವನಿ ಕೇಕೆಕೊಚ್ಚಿ ಬೆಂಗಳೂರಿನಲ್ಲಿ ವಿನೂತನ ಎಲ್‌ಪಿಜಿ ನಿರ್ವಹಣಾ ವ್ಯವಸ್ಥೆ ರಿಗ್ಯಾಸ್ ಅನ್ನು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.

ಗೃಹಬಳಕೆದಾರರು, ಶಿಕ್ಷಣ ಹಾಗೂ ವಾಣಿಜ್ಯ ಸಂಸ್ಥೆಗಳು ಮತ್ತು ಸಮುದಾಯಗಳನ್ನು ರಕ್ಷಿಸಲು ಎಲ್‌ಪಿಜಿ ಸುರಕ್ಷತಾ ಜಾಗೃತಿ ಮೂಡಿಸುವ ಹಾಗೂ ಮುನ್ನೆಚ್ಚರಿಕಾ ಪರಿಹಾರಗಳನ್ನು ಉತ್ತೇಜಿಸುವ ಅವರ ಬದ್ಧತೆಗೆ ಈ ಕಾರ್ಯಕ್ರಮವು ಸಾಕ್ಷಿಯಾಯಿತು.

ಬೆಂಗಳೂರಿನ ಲಘು ಉದ್ಯೋಗ ಭಾರತಿ, ಕರ್ನಾಟಕ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಸಂಸದರಾದ ಡಾ. ಸಿ. ಎನ್. ಮಂಜುನಾಥ್ ಅವರು ಗಣ್ಯರು ಹಾಗೂ ಆಹ್ವಾನಿತರ ಸಮ್ಮುಖದಲ್ಲಿ ಈ ವಿನೂತನ ಉತ್ಪನ್ನವನ್ನು ಉದ್ಘಾಟಿಸಿದರು.

ಸುಪ್ರಮ್ ಟೆಕ್ನಾಲಜೀಸ್ ಆಂಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಅವನಿ ಕೇಕೆಕೊಚ್ಚಿ ಅವರ ನಾಯಕತ್ವದಲ್ಲಿ ಅಭಿವೃದ್ಧಿಪಡಿಸಲಾದ ರಿಗ್ಯಾಸ್, ಎಲ್‌ಪಿಜಿ ಸುರಕ್ಷತೆ ಮತ್ತು ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಪರಿಹಾರವನ್ನು ಒದಗಿಸುತ್ತದೆ. ಎಲ್‌ಪಿಜಿ ಸೋರಿಕೆಯಂತಹ ಅಪಾಯಗಳ ಮುನ್ಸೂಚನೆ (ಅಲರ್ಟ್) ನೀಡುವುದು, ತುರ್ತು ಸನ್ನದ್ಧತೆಯನ್ನು ಹೆಚ್ಚಿಸುವುದು ಹಾಗೂ ಸಿಲಿಂಡರ್ ಪತ್ತೆಹಚ್ಚುವಿಕೆ (ಟ್ರ್ಯಾಕಿಂಗ್) ಮತ್ತು ಮರುಪೂರಣವನ್ನು (ರೀಫಿಲ್ಲಿಂಗ್) ಸುಲಭಗೊಳಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ದೇಶಾದ್ಯಂತ ಅಡುಗೆ ಅನಿಲವನ್ನೇ ನೆಚ್ಚಿಕೊಂಡಿರುವ ಕೋಟ್ಯಂತರ ಕುಟುಂಬಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬಾಧಿಸುತ್ತಿರುವ ಗಂಭೀರ ಸಮಸ್ಯೆಗೆ ಮುಕ್ತಿ ಹಾಡುವುದು ಈ ಆವಿಷ್ಕಾರದ ಗುರಿಯಾಗಿದೆ. “ಪ್ರತಿಯೊಂದು ಮನೆಗೂ ಸುರಕ್ಷಿತ ನಾಳೆಯನ್ನು ಕಾಣುವ ಹಕ್ಕಿದೆ” ಎಂಬ ಧ್ಯೇಯವಾಕ್ಯದಡಿ ರೂಪುಗೊಂಡಿರುವ ರಿಗ್ಯಾಸ್, ಕೇವಲ ತಾಂತ್ರಿಕ ಪರಿಹಾರಕ್ಕಷ್ಟೇ ಸೀಮಿತವಾಗಿರದೆ, ಎಲ್‌ಪಿಜಿ-ಸಂಬಂಧಿತ ಅಪಾಯಗಳ ಕುರಿತು ಜನರಲ್ಲಿ ನಿರಂತರ ಜಾಗೃತಿ, ಮುನ್ನೆಚ್ಚರಿಕೆ ಮತ್ತು ಸಮಯೋಚಿತ ಸ್ಪಂದನೆಯ ಸಂಸ್ಕೃತಿಯನ್ನು ಬೆಳೆಸುವ ಬೃಹತ್ ಸಾಮಾಜಿಕ ಆಂದೋಲನಕ್ಕೆ ಭದ್ರ ಬುನಾದಿ ಹಾಕಿದೆ.

ದೊಡ್ಡ ಧ್ಯೇಯಕ್ಕೆ ಪ್ರೇರಣೆಯಾದ ವೈಯಕ್ತಿಕ ದುರಂತ
ಅವನಿ ಅವರಿಗೆ ರಿಗ್ಯಾಸ್ ಆವಿಷ್ಕಾರದ ಹಿಂದಿರುವ ಪ್ರೇರಣೆ ಅತ್ಯಂತ ನೋವಿನ ಹಾಗೂ ವೈಯಕ್ತಿಕವಾದುದಾಗಿದೆ. ಕೋವಿಡ್-19 ಸಾಂಕ್ರಾಮಿಕದ ದಿನಗಳಲ್ಲಿ ಸಂಭವಿಸಿದ ಎಲ್‌ಪಿಜಿ ಸಿಲಿಂಡರ್ ಅವಘಡವೊಂದರಲ್ಲಿ ಅವರು ತಮ್ಮ ಸ್ವಂತ ಚಿಕ್ಕಮ್ಮನನ್ನು ಕಳೆದುಕೊಂಡಿದ್ದರು. ಅಂತಹ ದುರಂತಗಳು ಸಂತ್ರಸ್ತ ಕುಟುಂಬಗಳ ಮೇಲೆ ಬೀರುವ ಭೀಕರ ಭಾವನಾತ್ಮಕ ಆಘಾತ ಮತ್ತು ಆರ್ಥಿಕ ನಷ್ಟಗಳನ್ನು ಅವರು ಕಣ್ಣಾರೆ ಕಂಡಿದ್ದರು. ಈ ಕಹಿ ಘಟನೆಯೇ ಇಂತಹ ಅವಘಡಗಳು ಇನ್ನೆಂದೂ ಮರುಕಳಿಸದಂತೆ ತಡೆಯಬಲ್ಲ ಪರಿಣಾಮಕಾರಿ ಆವಿಷ್ಕಾರವನ್ನು ಅಭಿವೃದ್ಧಿಪಡಿಸುವ ಅವರ ಸಂಕಲ್ಪಕ್ಕೆ ಪ್ರೇರಣೆಯಾಯಿತು.

ಸುರಕ್ಷತೆ ಎಂಬುದು ಪ್ರತಿಯೊಬ್ಬರ ನಿತ್ಯಜೀವನದ ಮೂಲಭೂತ ಅಂಗವಾಗಬೇಕು ಎಂಬ ಆಶಯ ಹೊಂದಿರುವ ಅವನಿ, ಎಲ್‌ಪಿಜಿ ಸುರಕ್ಷತಾ ಜಾಗೃತಿಯನ್ನು ಪ್ರಥಮ ಚಿಕಿತ್ಸೆಯಷ್ಟೇ ಸಹಜ ಹಾಗೂ ಜನಸಾಮಾನ್ಯರಿಗೆ ಪರಿಚಿತವಾಗಿಸುವ ಧ್ಯೇಯ ಹೊಂದಿದ್ದಾರೆ. ಅಪಾಯಗಳನ್ನು ಮೊದಲೇ ಗ್ರಹಿಸುವ, ಅವಘಡದ ಸಮಯದಲ್ಲಿ ಸೂಕ್ತವಾಗಿ ಸ್ಪಂದಿಸುವ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಗೆ ಮೊದಲ ಆದ್ಯತೆ ನೀಡುವ ಅರಿವನ್ನು ವ್ಯಕ್ತಿಗಳು ಮತ್ತು ಸಮುದಾಯಗಳಲ್ಲಿ ಮೂಡಿಸುವುದು ಅವರ ಗುರಿಯಾಗಿದೆ.

ತಮ್ಮ ಬೆಂಬಲಿತ ಅಗ್ನಿ ಸುರಕ್ಷತಾ ಜಾಗೃತಿ ಅಭಿಯಾನವಾದ ಪ್ರಾಜೆಕ್ಟ್ ಸುರಕ್ಷಾ ಮೂಲಕ ಅವನಿ ಅವರು ಈ ಸಂದೇಶವನ್ನು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಡದೆ ಜನಸಾಮಾನ್ಯರ ಮನೆಬಾಗಿಲಿಗೆ ಕೊಂಡೊಯ್ಯುತ್ತಿದ್ದಾರೆ. ಮನೆಗಳ ಸುರಕ್ಷತೆ, ತುರ್ತು ಸನ್ನದ್ಧತೆ ಮತ್ತು ಜವಾಬ್ದಾರಿಯುತ ಅಡುಗೆ ಅನಿಲ ಬಳಕೆಯ ಕುರಿತು ಸಾರ್ವಜನಿಕ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಸಹಯೋಗದೊಂದಿಗೆ ಕೈಜೋಡಿಸಿರುವ ಪ್ರಾಜೆಕ್ಟ್ ಸುರಕ್ಷಾ, ದೇಶಾದ್ಯಂತ ಇರುವ ಕುಟುಂಬಗಳಿಗೆ ರಿಗ್ಯಾಸ್ ಹಾಗೂ ಎಲ್‌ಪಿಜಿ ಸುರಕ್ಷತಾ ಜಾಗೃತಿಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಹೊಂದಿದೆ.

ವಿಶೇಷವಾಗಿ ಇಂತಹ ಮುನ್ನೆಚ್ಚರಿಕಾ ತಂತ್ರಜ್ಞಾನ ಮತ್ತು ಸುರಕ್ಷತಾ ಶಿಕ್ಷಣದ ತೀವ್ರ ಅಗತ್ಯವಿರುವ ಸಮುದಾಯಗಳಿಗೆ ಇದನ್ನು ಅತ್ಯಂತ ಸುಲಭವಾಗಿ ತಲುಪಿಸುವುದು ಈ ಯೋಜನೆಯ ಮೂಲ ಉದ್ದೇಶ.
ಭಾರತದ ರಾಷ್ಟ್ರೀಯ ಎಲ್‌ಪಿಜಿ ತುರ್ತು ಸಹಾಯವಾಣಿ ಸಂಖ್ಯೆ 1906 ಅನ್ನು 100ರಷ್ಟೇ ಪ್ರತಿಯೊಬ್ಬ ನಾಗರಿಕನಿಗೂ ತಕ್ಷಣ ನೆನಪಾಗುವಂತೆ ಮಾಡುವುದು ಅವನಿ ಅವರ ಜಾಗೃತಿ ಅಭಿಯಾನದ ಪ್ರಮುಖ ಸ್ತಂಭವಾಗಿದೆ.

ಕರ್ನಾಟಕದಿಂದ ದೇಶದ ಮೂಲೆ ಮೂಲೆಗೆ

ಕರ್ನಾಟಕದಲ್ಲೇ ಉಗಮವಾಗಿರುವ ಈ ಮಹತ್ವದ ಯೋಜನೆ, ದೇಶಿಯ ನಾವೀನ್ಯತೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉದ್ಯಮಶೀಲತೆಗೆ ನಮ್ಮ ರಾಜ್ಯ ನೀಡುತ್ತಿರುವ ಗಣನೀಯ ಕೊಡುಗೆಯನ್ನು ಜಗತ್ತಿಗೆ ಸಾರುತ್ತಿದೆ.
ರಿಗ್ಯಾಸ್ ಯೋಜನೆಯು ಈಗಾಗಲೇ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಎಲಿವೇಟ್ ಪ್ರಶಸ್ತಿ ಹಾಗೂ ₹11 ಲಕ್ಷ ಅನುದಾನವನ್ನು ಪಡೆದುಕೊಂಡಿದ್ದು, ಯೋಜನೆಯ ಕ್ಷಿಪ್ರ ಬೆಳವಣಿಗೆ ಹಾಗೂ ಸಾರ್ವಜನಿಕ ಪ್ರಸಾರಕ್ಕೆ ಹೊಸ ಬಲ ತಂದುಕೊಟ್ಟಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments