ಕನ್ನಡತಿ, ಬರಹಗಾರ್ತಿ, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಗಿರುವ ಬಾನು ಮುಷ್ತಾಕ್ ಅವರ ಇಂಗ್ಲೀಷ್ ಗೆ ಅನುವಾದಿತ ಕೃತಿ ಹಾರ್ಟ್ ಲ್ಯಾಂಪ್ ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಒಲಿದಿದೆ. ಕನ್ನಡಕ್ಕೆ ಮೊದಲ ಬಾರಿ ಬೂಕರ್ ಪ್ರಶಸ್ತಿ ತಂದುಕೊಡುವ ಮೂಲಕ ಬಾನು ಮುಷ್ತಾಕ್ ಇತಿಹಾಸ ಬರೆದಿದ್ದಾರೆ.
ದಕ್ಷಿಣ ಭಾರತದಲ್ಲಿ ಮುಸ್ಲಿಮ್ ಮಹಿಳೆ ಮೇಲೆ ಹೇರುತ್ತಿರುವ ಕಟ್ಟುಪಾಡುಗಳ ಕುರಿತು ಬರೆದ ಕಿರು ಕಥೆಗೆ ಪ್ರಶಸ್ತಿ ಬಂದಿದೆ. ವಿಶೇಷ ಅಂದರೆ ಇದೇ ಮೊದಲ ಬಾರಿ ಕಿರು ಕಥೆಗೆ ಬೂಕರ್ ಒಲಿದಿರುವುದು. ಮತ್ತೊಂದು ವಿಶೇಷ ಅಂದರೆ ಆಂಗ್ಲ ಭಾಷೆಗೆ ಭಾಷಾಂತರ ಮಾಡಿದ ಲೇಖಕಿ ಕೂಡ ಕನ್ನಡತಿ ಆಗಿದ್ದಾರೆ.
ಬಾನು ಮುಷ್ತಾಕ್ ಪ್ರಶಸ್ತಿ ಮೊತ್ತದಲ್ಲಿ ಅರ್ದ ಪಾಲು 50 ಸಾವಿರ ಪೌಂಡ್ ಮೊತ್ತವನ್ನು ಭಾಷಾಂತರ ಮಾಡಿದ ಕೊಡಗಿನ ದೀಪ್ತಾ ಬಸ್ತಿ ಅವರೊಂದಿಗೆ ಹಂಚಿಕೊಂಡಿದ್ದಾರೆ. 1990ರಿಂದ 2023ರ ಅವಧಿಯಲ್ಲಿ ಬಾನು ಮುಷ್ತಾಕ್ 12 ಕಿರುಕಥೆಗಳನ್ನು ಬರೆದಿದ್ದಾರೆ.
ಲಂಡನ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾನು ಮುಷ್ತಾಕ್ ಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಜನರು ಭಾರೀ ಚಪ್ಪಾಳೆ ಮೂಲಕ ಅಭಿನಂದಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾನು ಮುಷ್ತಾಕ್, ಯಾವುದೇ ಕಥೆ ಸಣ್ಣದಲ್ಲ, ಯಾವುದೇ ಕಥೆ ಸ್ಥಳೀಯ ಅಲ್ಲ ಅಥವಾ ಯಾವುದೇ ಅನುಭವ ಸಣ್ಣದಲ್ಲ ಎಂಬುದನ್ನು ಈ ಕಥೆ ಜಗತ್ತಿಗೆ ಸಾರಿ ಹೇಳಿದೆ. ಜೀವನದ ಅನುಭವದ ಪುಟಗಳು ಹಲವು ಜೀವನದ ಕಗ್ಗಂಟುಗಳನ್ನು ಬಿಡಿಸುತ್ತದೆ ಎಂದರು.
ನಂತರ ಮಾತನಾಡಿದ ದೀಪಾ ಭಸ್ತಿ ಡಾ.ರಾಜ್ ಕುಮಾರ್ ಹಾಡಿದ ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯು ಹಾಡನ್ನು ಹಾಡಿದರು.


