Wednesday, May 13, 2026
Google search engine
Homeರಾಜ್ಯಜನಾರ್ದನ ರೆಡ್ಡಿ ಪ್ರಕರಣ ಕೈಗೆತ್ತಿಕೊಳ್ಳಲು ಹಿಂದೇಟು: ಒಂದೇ ದಿನದಲ್ಲಿ ಹಿಂದೆ ಸರಿದ ಮೂವರು ಜಡ್ಜ್ ಗಳು!

ಜನಾರ್ದನ ರೆಡ್ಡಿ ಪ್ರಕರಣ ಕೈಗೆತ್ತಿಕೊಳ್ಳಲು ಹಿಂದೇಟು: ಒಂದೇ ದಿನದಲ್ಲಿ ಹಿಂದೆ ಸರಿದ ಮೂವರು ಜಡ್ಜ್ ಗಳು!

ಹೈದರಾಬಾದ್: ಅಪರೂಪ ಮತ್ತು ಅಚ್ಚರಿಯ ಬೆಳವಣಿಗೆಯಲ್ಲಿ ತೆಲಂಗಾಣ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಒಂದೇ ದಿನ ಒಂದೇ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

ಇದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮೊದಲು ಎನ್ನಲಾಗಿದೆ,ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತಿತರರು ದೋಷಿಗಳಾಗಿರುವ ಓಬಳಾಪುರಂ ಅಕ್ರಮ ಗಣಿಕೆಗಾರಿಕೆ ಪ್ರಕರಣ ಇದಾಗಿದೆ.

ಜೈಲು ಶಿಕ್ಷೆ ಅನುಭವಿಸುತ್ತಿರುವ ತಪ್ಪಿತಸ್ಥರು ಸಲ್ಲಿಸಿದ ಮೇಲ್ಮನವಿಗಳನ್ನು ವಿಚಾರಣೆ ನಡೆಸಲು ಮೂವರು ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ.

ಗಾಲಿ ಜನಾರ್ದನ ರೆಡ್ಡಿ, ಬಿ.ವಿ.ಶ್ರೀನಿವಾಸ ರೆಡ್ಡಿ, ಮೆಫಾಜ್ ಅಲಿ ಖಾನ್, ವಿ.ಡಿ.ರಾಜಗೋಪಾಲ್ ಮತ್ತು ಓಬಳಾಪುರಂ ಮೈನಿಂಗ್ ಕಂಪನಿಗೆ (ಒಎಂಸಿ) ಸಿಬಿಐ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮೇ 6ರಂದು ನೀಡಿದ ತೀರ್ಪನ್ನು ಅಮಾನತುಗೊಳಿಸಿ ಜಾಮೀನು ನೀಡುವಂತೆ ಕೋರಿ ಶಿಕ್ಷೆಗೆ ಒಳಗಾದವರು ಅರ್ಜಿ ಸಲ್ಲಿಸಿದ್ದಾರೆ.

ಪೀಠದಿಂದ ಪೀಠಕ್ಕೆ ಅರ್ಜಿ ಜಂಪ್​: ಬುಧವಾರ ಜಾಮೀನು ಅರ್ಜಿಗಳ ವಿಚಾರಣೆ ನಿಗದಿಯಾಗಿತ್ತು. ಮೊದಲು ನ್ಯಾಯಮೂರ್ತಿ ಕೆ.ಶರತ್ ಅವರ ಪೀಠಕ್ಕೆ ಪ್ರಕರಣವನ್ನು ವಹಿಸಲಾಯಿತು. ಬಳಿಕ, ಅವರು ಅರ್ಜಿಗಳನ್ನು ಬೇರೆ ನ್ಯಾಯಾಧೀಶರ ಮುಂದಿಡಲು ರಿಜಿಸ್ಟ್ರಿಗೆ ಸೂಚಿಸಿದರು.

ನಂತರ, ಪ್ರಕರಣವನ್ನು ನ್ಯಾಯಮೂರ್ತಿ ಅಲಿಸೆಟ್ಟಿ ಲಕ್ಷ್ಮಿನಾರಾಯಣ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲಾಯಿತು. ಸಂಜೆ 7 ಗಂಟೆಗೆ ಸಮಯ ಕೂಡ ಫಿಕ್ಸ್​ ಮಾಡಲಾಯಿತು. ನ್ಯಾಯಾಧೀಶರು ಅರ್ಜಿಗಳ ವಿಚಾರಣೆಯಿಂದ ಹಿಂದೆ ಸರಿದು, ಬೇರೆ ಪೀಠದ ಮುಂದೆ ಇಡುವಂತೆ ತಾಕೀತು ಮಾಡಿದರು.

ಬಳಿಕ, ನ್ಯಾಯಮೂರ್ತಿ ನಾಗೇಶ್ ಭೀಮಪಾಕ ಅವರಿದ್ದ ಪೀಠದ ಮುಂದೆ ಪ್ರಕರಣವನ್ನು ಒಯ್ಯಲಾಯಿತು. ಇಬ್ಬರು ನ್ಯಾಯಾಧೀಶರು ಈಗಾಗಲೇ ವಿಚಾರಣೆಯಿಂದ ಹಿಂದೆ ಸರಿದಿರುವ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣದ ಕಡತಗಳನ್ನು ಪರಿಶೀಲಿಸಿದ ನಂತರ, ನ್ಯಾಯಮೂರ್ತಿ ಭೀಮಪಾಕ ಅವರು ಕೂಡ ತಾವೀ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.

ಕೋರ್ಟ್ ನಲ್ಲಿ ಕಾದ ವಕೀಲರು:

ಪ್ರಕರಣದ ಅರ್ಜಿಗಳು ಪೀಠದಿಂದ ಪೀಠಕ್ಕೆ ವರ್ಗವಾದ ಕಾರಣ, ದೋಷಿಗಳ ಪರ ಹಾಜರಿದ್ದ ವಕೀಲರು ಇಡೀ ದಿನ ಕೋರ್ಟ್​ ತುಂಬಾ ಅಲೆದಾಡಿದರು.

ಗಾಲಿ ಜನಾರ್ದನ ರೆಡ್ಡಿ ಪರವಾಗಿ ವಾಸಿರೆಡ್ಡಿ ವಿಮಲ್​ ವರ್ಮ, ಹಿರಿಯ ವಕೀಲರಾದ ನಾಗಮುತ್ತು ಮತ್ತು ಪಪ್ಪು ನಾಗೇಶ್ವರ ರಾವ್ ಅವರು ಬಿ.ವಿ.ಶ್ರೀನಿವಾಸ ರೆಡ್ಡಿ ಅವರನ್ನು ಪ್ರತಿನಿಧಿಸಿದ್ದರು. ಸುರೇಶ್ ಅವರು ಓಎಂಸಿ ಕಂಪನಿ ಪರವಾಗಿ, ಬಿ.ನಳಿನ್ ಕುಮಾರ್ ಅವರು ಮೆಫಾಜ್ ಅಲಿ ಖಾನ್ ಪರ, ಸಿಬಿಐ ಪರವಾಗಿ ಶ್ರೀನಿವಾಸ್ ಕಪಾಟಿಯಾ ಹಾಜರಿದ್ದರು.

ಮೇ 21ರಂದು ನಡೆದ ವಿಚಾರಣೆಯಲ್ಲಿ, ನ್ಯಾಯಮೂರ್ತಿ ನಂದಿಕೊಂಡ ನರಸಿಂಗ್ ರಾವ್ ಅವರು ಪ್ರಾಥಮಿಕ ವಾದಗಳನ್ನು ಆಲಿಸಿದ್ದರು. ಸಿಬಿಐ ಪ್ರತಿಕ್ರಿಯೆ ಬಳಿಕ ಆದೇಶ ನೀಡುವುದಾಗಿ ಹೇಳಿ ಪ್ರಕರಣವನ್ನು ಈ ವಾರಕ್ಕೆ ಮುಂದೂಡಿದ್ದರು.

ಸಹಜವಾಗಿ ನ್ಯಾಯಾಧೀಶರು ಯಾವುದೇ ಪ್ರಕರಣದ ಹಿನ್ನೆಲೆ ಅಥವಾ ವೈಯಕ್ತಿಕ ಕಾರಣಗಳಿಂದ ವಿಚಾರಣೆಯಿಂದ ಹಿಂದೆ ಸರಿಯುವುದು ಸಾಮಾನ್ಯವಾದರೂ, ಒಂದೇ ದಿನ ಮೂವರು ನ್ಯಾಯಾಧೀಶರು ಒಂದೇ ಪ್ರಕರಣದ ವಿಚಾರಣೆ ನಡೆಸಲು ಒಪ್ಪದಿರುವುದು ವಿಶೇಷವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments