ಬೆಂಗಳೂರು: ಸೆಪ್ಟೆಂಬರ್ನಲ್ಲಿ ಯಾವ ಕ್ರಾಂತಿ ನಡೆಯುತ್ತೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಕೆ.ಎನ್.ರಾಜಣ್ಣಗೆ ಮಾಹಿತಿ ಇರಬೇಕು. ಅವರನ್ನೇ ಕೇಳಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಸೆಪ್ಟಂಬರ್ ನಂತರ ಭಾರೀ ಬದಲಾವಣೆ ಆಗಲಿದೆ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ರಾಜಣ್ಣ ಅವರಿಗೆ ಯಾವ ಮಾಹಿತಿ ಇದೆ ಗೊತ್ತಿಲ್ಲ. ಸೆಪ್ಟೆಂಬರ್ನಲ್ಲಿ ಕ್ರಾಂತಿಯಾಗುತ್ತೆ ಅಂದಿದ್ದಾರೆ. ಅವರಿಗೆ ಯಾವುದೋ ಮಾಹಿತಿ ಇರಬೇಕು. ಇಲ್ಲದಿದ್ದರೆ ಆ ರೀತಿ ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೇಳುತ್ತಿರಲಿಲ್ಲ. ಯಾವ ಕ್ರಾಂತಿ ಅನ್ನೋದನ್ನು ಅವರನ್ನೇ ಕೇಳಿ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಈಗ ಹಲವು ಪವರ್ ಸೆಂಟರ್ ಗಳಾಗಿವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನಮ್ಮಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ. ಇರೋದು ಒಂದೇ ಪವರ್ ಸೆಂಟರ್. ಆಡಳಿತದ ದೃಷ್ಟಿಯಿಂದ ಸಿಎಂ ಪವರ್ ಸೆಂಟರ್. ಪಕ್ಷದ ಅಧ್ಯಕ್ಷರು, ಉಸ್ತುವಾರಿಗಳೂ ಪವರ್ ಸೆಂಟರ್ಗಳೇ. ಎಲ್ಲಕ್ಕಿಂತ ಮಿಗಿಲಾಗಿ ಹೈಕಮಾಂಡ್ ಇದೆ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ’ ಎಂದರು.
ಮಂತ್ರಿಗಳ ಬದಲಾವಣೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಅವರಿಗಿರುವ ಮಾಹಿತಿ ಪ್ರಕಾರ ಹೇಳಿರಬಹುದು. ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ ತಿಳಿದಂತೆ ಯಾವುದೇ ಬದಲಾವಣೆ ಆಗಲ್ಲ. ಮುಂದೇನಾಗುತ್ತೆ ಅಂತ ಹೇಗೆ ಹೇಳಲು ಸಾಧ್ಯ?. ಮುಂದೇನು ಅಂತ ಹೈಕಮಾಂಡ್ ತೀರ್ಮಾನಿಸುತ್ತದೆ” ಎಂದು ಸ್ಪಷ್ಟಪಡಿಸಿದರು.
ಸಿಎಂ ಗ್ರಿಪ್ ಕಳೆದುಕೊಂಡಿಲ್ಲ: ಸಿಎಂ ಗ್ರಿಪ್ ಕಳೆದುಕೊಂಡಿದ್ದಾರೆಂಬ ಆರೋಪ ವಿಚಾರವಾಗಿ ಮಾತನಾಡಿ, “ಸಿಎಂ ಯಾವುದೇ ಗ್ರಿಪ್ ಕಳೆದುಕೊಂಡಿಲ್ಲ. ಸಿಎಂ ಈಗ ಆಡಳಿತ ನಡೆಸ್ತಾ ಇಲ್ವಾ?. ಸಣ್ಣಪುಟ್ಟ ವಿಚಾರಗಳಿರುತ್ತವೆ, ಬಗೆಹರಿಸುತ್ತಾರೆ. ಬಿಜೆಪಿಯವರು ಹಿಂದೆಯೂ ಟೀಕೆ ಮಾಡುತ್ತಿದ್ದರು. ಈಗಲೂ ಮಾಡುತ್ತಾನೆ ಇದ್ದಾರೆ. ಸಿಎಂ ಅವರಿಗೆ ಸ್ವಲ್ಪ ವಯಸ್ಸಾಗಿರಬಹುದು. ಹಾಗಾಗಿ ಅವರು ಸ್ವಲ್ಪ ಸಾಫ್ಟ್ ಆಗಿರಬಹುದು. ಅವರು ಎಲ್ಲಿಯೂ ಗ್ರಿಪ್ ಕಳೆದುಕೊಂಡಿಲ್ಲ” ಎಂದು ಹೇಳಿದರು.
ಸುರ್ಜೇವಾಲಾ ರಾಜ್ಯಕ್ಕೆ ಆಗಮನ ವಿಚಾರವಾಗಿ ಮಾತನಾಡಿ, “ಅವರು ನಮ್ಮ ಜನರಲ್ ಸೆಕ್ರೆಟರಿ. ತಿಂಗಳಿಗೊಮ್ಮೆ ಬರುತ್ತಲೇ ಇರುತ್ತಾರೆ. ಕೆಲವು ಸಲ ತಿಂಗಳಿಗೆ ಎರಡು ಬಾರಿ ಬರುತ್ತಾರೆ. ಅದರಲ್ಲಿ ವಿಶೇಷತೆ ಏನಿಲ್ಲ” ಎಂದು ತಿಳಿಸಿದರು.



