ಪತ್ನಿ ಕುಟುಂಬದವರು ಹಾಗೂ ಪೊಲೀಸರ ದಬ್ಬಾಳಿಕೆ ಹಾಗೂ ಹಲ್ಲೆಯಿಂದ ನೊಂದ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದ ಬಿಳಿ ಪ್ಯಾಂಟ್ ಧರಿಸಿ ಅಸ್ವಾಭಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಫಾರೂಖಾಬಾದ್ ನ ಚೆಡ್ಡಾ ನಗ್ಲಾ ಪ್ರದೇಶದಲ್ಲಿ ವಿವಾಹಿತೆ ವನಾರಿ ಲಾಲ್, ತನ್ನ ಗಂಡ ದಿಲೀಪ್ ರಜಪೂತ್ ವಿರುದ್ಧ ಕುಡಿದು ಬಂದು ಹೊಡೆಯುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.
ತಂದೆಯ ಜೊತೆ ಪೊಲೀಸ್ ಠಾಣೆಗೆ ಹೋದಾಗ ಪೊಲೀಸ್ ಪೇದೆ ಯಶವಂತ್ ಯಾದವ್ ಎಂಬಾತ ಪ್ರಕರಣ ಇತ್ಯರ್ಥಗೊಳಿಸಲು 50 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಒಪ್ಪದೇ ಇದ್ದಾಗ ಪೊಲೀಸರು ಹಲ್ಲೆ ಮಾಡಿದ್ದಾರೆ.
ನಂತರ ಮತ್ತೊಬ್ಬ ಪೊಲೀಸ್ ಮಹೇಶ್ ಉಪಾಧ್ಯಾಯ 10 ಸಾವಿರ ಕಡಿಮೆ ಮಾಡುತ್ತೇವೆ. 40 ಸಾವಿರ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಒಪ್ಪದೇ ಇದ್ದಾಗ ದಿಲ್ಜಿತ್ ಗೆ ಬೇಡಿ ಹಾಕಿ ಅಪಮಾನಿಸಿದ್ದಾರೆ.
ಪೊಲೀಸ್ ಠಾಣೆಯಿಂದ ಮರಳಿದ ಬೆನ್ನಲ್ಲೇ ದಿಲೀಪ್ ರಜಪೂತ್ ತಾನು ಧರಿಸಿದ್ದ ಬಿಳಿ ಪ್ಯಾಂಟ್ ಮೇಲೆ ನೀಲಿ ಬಣ್ಣದ ಇಂಕ್ ಪೆನ್ ನಿಂದ ಘಟನೆಯನ್ನು ವಿವರಿಸಿ ಡೆತ್ ನೋಟ್ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಸಾವಿಗೆ ಕಾರಣವಾದ ಪತ್ನಿ ವನವಾರಿ ಲಾಲ್, ಆಕೆಯ ಸೋದರ ರಾಜು, ಸೋದರ ಮಾವ ರಾಜೇಶ್ ರಜಪೂತ್ ಹಾಗೂ ಇಬ್ಬರು ಪೊಲೀಸ್ ಪೇದೆಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾನೆ.
ಮಂಗಳವಾರ ಬೆಳಿಗ್ಗೆ ದಿಲೀಪ್ ಮೃತದೇಹ ಪತ್ತೆಯಾಗಿದ್ದು, ಕುಟುಂಬದವರು ಹಾಗೂ ನೆರೆಹೊರೆಯುವರು ಶವವನ್ನು ಮುಂದಿಟ್ಟು ಮೃತನಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.



