ಗೂಗಲ್ ಮ್ಯಾಪ್ ನೋಡಿಕೊಂಡು ಮಹಿಳೆ ಚಲಾಯಿಸುತ್ತಿದ್ದ ಕಾರು ಪ್ರತಾಪಕ್ಕೆ ಬಿದ್ದ ಘಟನೆ ನವೀ ಮುಂಬೈನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಬೆಲಾಪುರ್ ನಿಂದ ಉಲ್ವೆಗೆ ಕಾರಿನಲ್ಲಿ ಮರಳುತ್ತಿದ್ದ ಮಹಿಳೆ ಗೂಗಲ್ ಮ್ಯಾಪ್ ನೋಡಿಕೊಂಡು ಅದು ತೋರಿಸಿದ ದಾರಿಯಲ್ಲಿ ಸಾಗುತ್ತಿದ್ದರು.
ಬೆಲಾಪುರ್ ನಲ್ಲಿ ಮೇಲ್ಸೆತುವೆ ಮೇಲಿಂದ ಹೋಗಬೇಕಾಗಿತ್ತು. ಆದರೆ ಗೂಗಲ್ ಮ್ಯಾಪ್ ಕೆಳಗಿನ ದಾರಿ ತೋರಿಸುತ್ತಿತ್ತು. ಇದು ಧ್ರುವತಾರಾ ಜೆಟ್ಟಿ ಕಡೆ ಹೋಗುವ ಮಾರ್ಗವಾಗಿದ್ದು ಇದನ್ನು ಅರಿಯದ ಮಹಿಳೆ ಕಾರು ಚಲಾಯಿಸಿಕೊಂಡು ಹೋಗಿದ್ದು ಕೆಲವೇ ಕ್ಷಣಗಳಲ್ಲಿ ಮೇಲಿಂದ ಕೆಳಗೆ ಕಾರು ಬಿದ್ದಿದೆ.
ಕಡಲ ಕಿನಾರೆಯ ಭದ್ರತಾ ಸಿಬ್ಬಂದಿಗಳು ಕಾರು ಬೀಳುವುದನ್ನು ನೋಡಿ ಕೂಡಲೇ ರಕ್ಷಣೆಗೆ ಧಾವಿಸಿದ್ದು, ಮಹಿಳೆಯನ್ನು ರಕ್ಷಿಸಿದ್ದಾರೆ. ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಿದ್ದಾರೆ.
ಗೂಗಲ್ ಮ್ಯಾಪ್ ನೋಡಿಕೊಂಡು ಹೋದ ವಾಹನಗಳು ಅಪಘಾತಕ್ಕೀಡಾಗಿರುವುದು ಇದೇ ಮೊದಲೇನು ಅಲ್ಲ. ಹಲವಾರು ಬಾರಿ ಇಂತಹ ಘಟನೆಗಳು ನಡೆದಿದ್ದರೂ ವಾಹನ ಚಾಲಕರು ಕಣ್ಮುಚಿಕೊಂಡು ಗೂಗಲ್ ಮ್ಯಾಪ್ ಫಾಲೋ ಮಾಡುವುದು ಅಭ್ಯಾಸವಾಗಿ ಬಿಟ್ಟಿದೆ.



