ಚಿತ್ರದುರ್ಗ: ಮರ್ಯಾದೆಗೆ ಅಂಜಿ ಹೆಚ್‌ಐವಿ ಪೀಡಿತ ತಮ್ಮನನ್ನು ಕೊಲೆಗೈದು ತಪ್ಪಿಸಿಕೊಳ್ಳಲು ಯತ್ನಿಸಿದ ಅಕ್ಕ ಹಾಗೂ ಭಾವನನ್ನು ಹೊಳಲ್ಕೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಳಲ್ಕೆರೆ ತಾಲೂಕಿನ ದುಮಿ ಗ್ರಾಮದ ಮಲ್ಲಿಕಾರ್ಜುನ್ (23) ಕೊಲೆಗೈದ ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಲ್ಲಿಕಾರ್ಜುನ್ ಬೆಂಗಳೂರಿನಲ್ಲಿ ಗಾರ್ಮೆಂರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಕಳೆದ ಜುಲೈ 23ರಂದು ತನ್ನ ಸ್ವಗ್ರಾಮವಾದ ದುಮ್ಮಿಗೆ ಕಾರಿನಲ್ಲಿ ಸ್ನೇಹಿತರೊಂದಿಗೆ ಬರುತ್ತಿದ್ದಾಗ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ಅಪಘಾತ ಸಂಭವಿಸಿ ಕಾಲು ಮುರಿವಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದ.
ಅಪಘಾತಗೊಂಡಿದ್ದ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ನೀಡಲಾಗಿತ್ತು. ರಕ್ತ ಪರೀಕ್ಷೆ ವೇಳೆ ಮಲ್ಲಿಕಾರ್ಜುನ್ ಹೆಚ್‌ಐವಿ ಸೋಂಕಿತನಾಗಿರುವುದು ಪತ್ತೆಯಾಗಿದೆ. ಜುಲೈ 25ರಂದು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯಿಂದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಅಂಬುಲೆನ್ಸ್ ನಲ್ಲೇ ಮಲ್ಲಿಕಾರ್ಜುನನ್ನ ಅಕ್ಕನೇ ಕೊಲೆಗೈದಿದ್ದಾಳೆ.
ಇದಕ್ಕೆ ಪತಿ ಮಂಜುನಾಥ್ ಕೂಡ ಸಾಥ್ ನೀಡಿದ್ದಾನೆ. ಆದರೆ ಇದು ಯಾರಿಗೂ ಗೊತ್ತಾಗಿರಲಿಲ್ಲ.
ಇನ್ನು ಅಂತ್ಯಕ್ರಿಯೆ ವೇಳೆ ಮಲ್ಲಿಕಾರ್ಜುನ್‌ನ ಕುತ್ತಿಗೆ ಮೇಲಿದ್ದ ಗಾಯದ ಗುರುತು ಕಂಡು ಸಂಬಂಧಿಕರು ಹಾಗು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು.
ಬಳಿಕ ಮೃತನ ತಂದೆ ನಾಗರಾಜ್ ಹೊಳಲ್ಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ವೇಳೆ ಮಲ್ಲಿಕಾರ್ಜುನ ಹೆಚ್‌ಐವಿ ಫೀಡಿತ ಎಂಬ ಕಾರಣಕ್ಕೆ ಮರ್ಯಾದೆಗೆ ಅಂಜಿ ಸಹೋದರಿಯೇ ಹತ್ಯೆಗೈದಿರುವ ಸತ್ಯ ಬೆಳಕಿಗೆ ಬಂದಿದೆ.
ಈ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ನಿಶಾ ಹಾಗೂ ಆಕೆಯ ಪತಿ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.



