2000ರಿಂದ 2015ರವರೆಗೆ ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವು ಪ್ರಕರಣಗಳ ತನಿಖೆಯ ದಿಕ್ಕು ತಪ್ಪಿಸಲು ಬೆಳ್ತಂಗಡಿ ಪೊಲೀಸರು ದಾಖಲೆಗಳನ್ನು ವ್ಯವಸ್ಥಿತವಾಗಿ ಡಿಲಿಟಿ ಮಾಡಿರುವ ಆಘಾತಕಾರಿ ಅಂಶ ಆರ್ ಟಿಐಯಲ್ಲಿ ಬಹಿರಂಗಗೊಂಡಿದೆ.
ಧರ್ಮಸ್ಥಳದಲ್ಲಿ ನೂರಾರು ಯುವತಿಯರ ಶವಗಳನ್ನು ಹೂತು ಹಾಕಿರುವ ಪ್ರಕರಣಗಳು ಬೆಳಕಿಗೆ ಬಂದು ತನಿಖೆಗೆ ರಾಜ್ಯ ಸರ್ಕಾರ ಮುಂದಾಗುತ್ತಿದ್ದಂತೆ ಬೆಳ್ತಂಗಡಿ ಪೊಲೀಸರು 15 ವರ್ಷಗಳ ಅಸಹಜ ಸಾವು ಪ್ರಕರಣಗಳ ದಾಖಲೆಯನ್ನು ನಾಶಪಡಿಸಿರುವುದು ಆರ್ ಟಿಐನಲ್ಲಿ ಬೆಳಕಿಗೆ ಬಂದಿದೆ.
ಆರ್ ಟಿಐ ಕಾರ್ಯಕರ್ತ ಜಯಂತ್ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳ ಮುಂದೆ ಶನಿವಾರ ಸಾರ್ವಜನಿಕರ ಸಮ್ಮುಖದಲ್ಲಿ ಬಹಿರಂಗವಾಗಿ ದಾಖಲೆಗಳ ಸಮೇತ ಬೆಳ್ತಂಗಡಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಳ್ತಂಗಡಿ ಪೊಲೀಸರು ಕಳೆದ 15 ವರ್ಷಗಳಲ್ಲಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದ ಅಸಹಜ ಯುವತಿಯರ ಸಾವು ಪ್ರಕರಣಗಳ ಕುರಿತು ತನಿಖೆಯನ್ನೇ ನಡೆಸಿಲ್ಲ. ಅಲ್ಲದೇ ಹಲವಾರು ರೀತಿಯಲ್ಲಿ ನಿಯಮ ಪಾಲನೆ ಮಾಡದೇ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದು, ಇದೀಗ ಎಸ್ ಐಟಿ ಪೊಲೀಸರು ಬೆಳ್ತಂಗಡಿ ಪೊಲೀಸರ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆ ಇದೆ.
ಧರ್ಮಸ್ಥಳದಲ್ಲಿ ಇದುವರೆಗೂ ನಡೆದ ನಾಪತ್ತೆ ಪ್ರಕರಣ, ಅಸಹಜ ಸಾವು, ಮರಣೋತ್ತರ ಪರೀಕ್ಷೆ ವರದಿ, ಗೋಡೆ ಬರಹ, ಅವರ ಪತ್ತೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಅವರ ಭಾವಚಿತ್ರಗಳನ್ನು ನೀಡುವಂತೆ ಕೋರಿ ಬೆಳ್ತಂಗಡಿ ಪೊಲೀಸರಿಗೆ ಮನವಿ ಮಾಡಿದ್ದೆ. ಆದರೆ ಈ ದಾಖಲೆಗಳನ್ನು ನೀಡಲು ನಿರಾಕರಿಸಿದ ಪೊಲೀಸರು, ನಿಯಮಿತ ಆಡಳಿತ ಪ್ರಕ್ರಿಯೆ ಅಂಗವಾಗಿ ದಾಖಲೆಗಳನ್ನು ನಾಶಪಡಿಸಿದ್ದಾಗಿ ತಿಳಿಸಿದ್ದಾರೆ ಎದು ಜಯಂತ್ ಎಸ್ ಐಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಆಗಸ್ಟ್ 2ರಂದು ಎಸ್ ಐಟಿ ಪೊಲೀಸರಿಗೆ ದೂರು ನೀಡಿದ್ದು, ಸ್ವತಃ ನಾನೇ ಈ ಪ್ರಕರಣದ ಸಾಕ್ಷಿಯಾಗಿದ್ದೇನೆ. ಬೆಳ್ತಂಗಡಿ ಪೊಲೀಸರು ಕಾನೂನು ಪಾಲಿಸದೇ ಅಸಹಜ ಸಾವು ಪ್ರಕರಣಗಳ ದಾಖಲೆ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಸೂಕ್ತ ಕ್ರಮ್ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.


