ಭಾರತ ತಂಡದ ಪ್ರಮುಖ ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿರುವ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ನಲ್ಲಿ ಮಾತ್ರವಲ್ಲ, ಫ್ಯಾಷನ್ ನಿಂದಲೂ ಗಮನ ಸೆಳೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಪ್ರತಿ ಋತುವಿನಲ್ಲೂ ಹೊಸ ಹೇರ್ ಸ್ಟೇಲ್, ವಿಶಿಷ್ಟ ಉಡುಗೆ ಹಾಗೂ ದುಬಾರಿ ಶೂ ಹಾಗೂ ವಾಚ್ ಧರಿಸುವ ಮೂಲಕ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಿರುವ ಹಾರ್ದಿಕ್ ಪಾಂಡ್ಯ ಇದೀಗ ದುಬಾರಿ ಬೆಲೆಯ ವಾಚ್ ಧರಿಸುವ ಮೂಲಕ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು, ಇತ್ತೀಚೆಗೆ ಅಭ್ಯಾಸದ ವೇಳೆ ಹಾರ್ದಿಕ್ ಪಾಂಡ್ಯ ಧರಿಸಿದ್ದ ವಾಚ್ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಮೂಲಗಳ ಪ್ರಕಾರ ಈ ವಾಚ್ ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಟಿ-20 ಟೂರ್ನಿಯ ಪ್ರಶಸ್ತಿ ಮೊತ್ತಕ್ಕಿಂತ ದುಬಾರಿ ಆಗಿದೆ.
ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ಧರಿಸಿದ ಈ ವಾಚ್ ರಿಚರ್ಡ್ ಮಿಲ್ಲೆ ಆರ್ ಎಂ-27-04 ಆಗಿದೆ. ಈ ವಾಚ್ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ತಯಾರಿಸಿದ್ದು, ಕೆಲವರ ಕೈಗೆ ಅಷ್ಟೇ ಇದು ಸಿಕ್ಕಿದೆ.
ರಿಚರ್ಡ್ ಮಿಲ್ಲೆ ಕಂಪನಿಯ ಈ ವಾಚ್ ಬೆಲೆ ನಿಖರವಾಗಿ ಬಹಿರಂಗಪಡಿಸಲಾಗಿಲ್ಲ. ಆದರೆ ಮೂಲಗಳ ಪ್ರಕಾರ ಈ ವಾಚ್ ಮೌಲ್ಯ ಸುಮಾರು 20 ಕೋಟಿ ರೂ. ಆಗಿದೆ. ಇನ್ ಸ್ಟಾಗ್ರಾಂ ನೋಡಿಕೊಳ್ಳುವ ವಾಚ್ ಶಾಪರ್ ಪ್ರಕಾರ ಇದರ ಮೌಲ್ಯ 15 ಕೋಟಿ ರೂ. ಆಗಿದೆ.
ಒಂದು ವೇಳೆ ಈ ವಾಚ್ ಮೌಲ್ಯ 20 ಕೋಟಿ ರೂ. ಆಗಿದ್ದರೆ, ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಪ್ರಶಸ್ತಿ ಮೊತ್ತಕ್ಕಿಂತ 8 ಪಟ್ಟು ದುಬಾರಿ ಆಗಿದೆ. ಏಷ್ಯಾಕಪ್ ಪ್ರಶಸ್ತಿ ವಿಜೇತರಿಗೆ 2.6 ಕೋಟಿ ರೂ. ಬಹುಮಾನ ಮೊತ್ತ ಲಭಿಸಲಿದೆ.
31 ವರ್ಷದ ಹಾರ್ದಿಕ್ ಪಾಂಡ್ಯ 114 ಟಿ-20 ಪಂದ್ಯಗಳಲ್ಲಿ ಆಡಿದ್ದು, 1812 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ಪರಿಣಾಮಕಾರಿಯಾಗಿದ್ದು, 94 ವಿಕೆಟ್ ಗಳಿಸಿದ್ದಾರೆ. ಏಷ್ಯಾಕಪ್ ನಲ್ಲಿ 2000 ರನ್ ಹಾಗೂ 100 ವಿಕೆಟ್ ಗಳ ಸಾಧನೆ ಮಾಡುವ ನಿರೀಕ್ಷೆ ಇದೆ.


