ಸಂಘಟಿತ ಪ್ರದರ್ಶನ ನೀಡಿದ ಭಾರತ ತಂಡ 7 ವಿಕೆಟ್ ಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಏಷ್ಯಾಕಪ್ ಟಿ-20 ಟೂರ್ನಿಯಲ್ಲಿ ಅಧಿಪತ್ಯ ಸ್ಥಾಪಿಸಿತು.
ದುಬೈನಲ್ಲಿ ಭಾನುವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಪಾಕಿಸ್ತಾನ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ಗೆ 127 ರನ್ ಗೆ ನಿಯಂತ್ರಿಸಿದ ಭಾರತ ತಂಡ 15.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತ ಬೇಗನೇ ಶುಭಮನ್ ಗಿಲ್ (10) ವಿಕೆಟ್ ಕಳೆದುಕೊಂಡಿತು. ನಂತರ ಅಭಿಷೇಕ್ ಶರ್ಮ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಉತ್ತಮ ಕೊಡುಗೆ ನೀಡಿ ತಂಡವನ್ನು ಮುನ್ನಡೆಸಿದರು. ಅಭಿಷೇಕ್ ಶರ್ಮ 13 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 31 ರನ್ ಬಾರಿಸಿ ನಿರ್ಗಮಿಸಿದರು.
ನಾಯಕ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 47 ರನ್ ಬಾರಿಸಿ ಅಜೇಯರಾಗಿ ಉಳಿದರು. ತಿಲಕ್ ವರ್ಮಾ (31 ರನ್) ಜೊತೆ ಮೂರನೇ ವಿಕೆಟ್ ಗೆ 56 ರನ್ ಜೊತೆಯಾಟ ನಿಭಾಯಿಸಿ ಸುಲಭ ಗೆಲುವು ಖಾತರಿಪಡಿಸಿದರು. ಕೊನೆಯಲ್ಲಿ ಶಿವಂ ದುಬೆ ಅಜೇಯ 10 ರನ್ ಗಳಿಸಿದರು.
ಪಾಕಿಸ್ತಾನದ ಪರ ಸೈಮ್ ಅಯೂಬ್ 35 ರನ್ ನೀಡಿ ಬಿದ್ದ ಎಲ್ಲಾ 3 ವಿಕೆಟ್ ಪಡೆದು ಗಮನ ಸೆಳೆದರೆ ಉಳಿದ ಯಾವುದೇ ಬೌಲರ್ ಗಳು ಭಾರತೀಯ ಬ್ಯಾಟ್ಸ್ ಮನ್ ಗಳ ಮುಂದೆ ಪರಿಣಾಮಕಾರಿ ಆನಿಸಲೇ ಇಲ್ಲ.


