ಜಾತಿಗಣತಿಯ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕೇ ಹೊರತು ಹಿಂದು ಎಂದು ಬರೆಸಬೇಡಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮುದಾಯಕ್ಕೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ ಇದೇ ತಿಂಗಳ 22ರಿಂದ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ (ಜಾತಿ ಗಣತಿ)ಯಲ್ಲಿ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತರು ಎಂದು ಮಾತ್ರ ನಮೂದಿಸುವಂತೆ ಮನವಿ ಮಾಡಿದೆ.
ಧರ್ಮದ ಕಾಲಂನಲ್ಲಿ ಹಿಂದು ಬದಲಿಗೆ ‘ವೀರಶೈವ ಲಿಂಗಾಯತ’ ಧರ್ಮ ಎಂದೇ ನಮೂದಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಸ್ಪಷ್ಟವಾಗಿ ಸೂಚನೆ ನೀಡಿದೆ. ಈ ಜಾಗದಲ್ಲಿ ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಹಿಂದು ಎಂದು ನಮೂದಿಸಬಾರದು ಎಂದು ಸೂಚಿಸಲಾಗಿದೆ.
ಮಹಾಸಭಾದ ಈ ಸೂಚನೆಯು ಸಮುದಾಯದ ಮುಖಂಡರು, ರಾಜಕಾರಣಿಗಳು ಹಾಗೂ ಸ್ವಾಮೀಜಿಗಳಲ್ಲಿ ಸಾಕಷ್ಟು ಪರ, ವಿರೋಧ ಚರ್ಚೆಗೆ ವೇದಿಕೆಯಾಗಿದೆ. ಬಸವಣ್ಣನವರು ಹಿಂದು ಧರ್ಮದಿಂದ ಹೊರಬರಲು ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ಅವರ ಅನುಯಾಯಿಗಳು ನಾವು ಎಂದು ಒಂದು ವರ್ಗ ಪ್ರತಿಪಾದಿಸಿದರೆ ಮತ್ತೊಂದು ವರ್ಗ ನಾವು ಲಿಂಗಾಯತರಾದರೂ ಹಿಂದುಗಳು ಎಂದು ವಾದಿಸುತ್ತಿದೆ.
ಪ್ರತ್ಯೇಕ ಧರ್ಮ ಹೋರಾಟಕ್ಕೂ ಒಂದು ಅಸ್ತ್ರ?
ವೀರಶೈವ ಲಿಂಗಾಯತರು ಹಿಂದು ಧರ್ಮಕ್ಕೆ ಸೇರಿದವರಲ್ಲ, ನಾವು ಹಿಂದೂಗಳಲ್ಲ ವೀರಶೈವ ಲಿಂಗಾಯತವೇ ಪ್ರತ್ಯೇಕ ಧರ್ಮವಾಗಿದೆ ಎಂದು ಏಳೆಂಟು ದಶಕಗಳಿಂದಲೂ ಪ್ರತಿಪಾದನೆ ಮಾಡುತ್ತ ಬಂದಿರುವ ವೀರಶೈವ ಲಿಂಗಾಯತ ಮಹಾಸಭಾವು, ಜಾತಿಗಣತಿ ಸಮೀಕ್ಷೆಯನ್ನು ಪ್ರತ್ಯೇಕ ಧರ್ಮ ಹೋರಾಟಕ್ಕೂ ಒಂದು ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿರುವಂತಿದೆ.
ವೀರಶೈವ ಲಿಂಗಾಯತವು ಪ್ರತ್ಯೇಕ ಧರ್ಮವೆಂದು ಸರ್ಕಾರದ ಜಾತಿ ಗಣತಿ ಸಂದರ್ಭದಲ್ಲಿ ದಾಖಲಾದರೆ ಭವಿಷ್ಯದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೋರಾಟಕ್ಕೆ ಭೀಮ ಬಲ ದೊರೆತಂತಾಗುತ್ತದೆ ಎನ್ನುವುದು ಮಹಾಸಭಾದ ಲೆಕ್ಕಾಚಾರ ಇದ್ದಂತಿದೆ.



