ಬೆಂಗಳೂರು: ರಾಜ್ಯದಲ್ಲಿರುವ 440 ಪ್ರಥಮ ದರ್ಜೆ ಕಾಲೇಜುಗಳಲ್ಲಿ 428 ಕಾಲೇಜುಗಳಲ್ಲಿ ಪ್ರಾಂಶುಪಾಲರಿಲ್ಲ ಎಂದು ವಿಧಾನಪರಿಷತ್ ನಲ್ಲಿ ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಕರ್ಯ ಒಳಗೊಂಡ ಹೊಸದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಅನುದಾನ ನೀಡಬೇಕು. ಈ ಮೂಲಕ ಉನ್ನತ ಶಿಕ್ಷಣ ದಾಖಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಬುಧವಾರ ಸರ್ಕಾರದ ಗಮನ ಸೆಳೆದರು.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಮಾತನಾಡಿ, ರಾಜ್ಯದಲ್ಲಿ ಒಟ್ಟು 468 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 420 ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿಯಿವೆ. ಹಂತ – ಹಂತವಾಗಿ ನೇಮಿಸಲಾಗುತ್ತಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಇಲಾಖಾ ವ್ಯಾಪ್ತಿಯಲ್ಲಿ 11 ಡಿಗ್ರಿ ಹಾಗೂ 8 ಖಾಸಗಿ ಅನುದಾನಿತ ಪಿಯು ಕಾಲೇಜು ಸೇರಿ ಒಟ್ಟಾರೆ 19 ಕಾಲೇಜುಗಳಿವೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳಿಗೆ ಮೇಲಿನ ಒಟ್ಟು 19 ಇಲಾಖಾ ವ್ಯಾಪ್ತಿಯ ಮೂಲ ಸೌಕರ್ಯಗಳುಳ್ಳ ಪದವಿ ಕಾಲೇಜುಗಳಿವೆ. ಹೊಸದಾಗಿ ಕಾಲೇಜು ಮಂಜೂರು ಮಾಡುವಾಗ ಕಾಲೇಜಿನ ಮೂಲಸೌಕರ್ಯ ಬಗ್ಗೆ ಗಮನ ಹರಿಸಬೇಕಾಗುತ್ತದೆ ಎಂದರು.
2026-2027ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ 8 ಹೊಸ ಕಾಲೇಜುಗಳನ್ನು ಸ್ಥಾಪಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ದಾವಣಗೆರೆಯಲ್ಲಿ ಹೊಸದಾಗಿ ಕಾಲೇಜು ಮಂಜೂರು ಕುರಿತಂತೆ ಮತ್ತೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.



