ಮಹಾಲಯ ಅಮಾವಸ್ಯೆ ದಿನದಂದು ಮಹಿಳೆಯೊಬ್ಬರು ದೇವಸ್ಥಾನದ ಗಣೇಶಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.
ಬೇಲೂರು ಪಟ್ಟಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಮಹಿಳೆಯನ್ನು ಹಾಸನದ ಗುಡ್ಡೇನಹಳ್ಳಿ ಬಳಿ ವಶಕ್ಕೆ ಪಡೆಯಲಾಗಿದೆ. ಬಾಣಾವರ ಪಿಎಸ್ಐ ಸುರೇಶ್, ಶೋಭಾ ನೇತೃತ್ವದ ತಂಡ ಮಹಿಳೆಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಮುಂದಾಗಿದೆ.
ಬೆಳಗ್ಗೆ ಭಕ್ತಾಧಿಗಳು ಕೈ ಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಕೃತ್ಯ ಖಂಡಿಸಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಬೇಲೂರು ತಹಸೀಲ್ದಾರ್, ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ರು. ಮತ್ತೊಂದೆಡೆ ಅರ್ಚಕರು ಶುದ್ಧಿಕಾರ್ಯ ನಡೆಸಿದ್ದಾರೆ. ತನಿಖೆಗೆ ಮುಂದಾದ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ದೇವಸ್ಥಾನಕ್ಕೆ ಮಹಿಳೆಯೊಬ್ಬರು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಎಂಟ್ರಿಯಾದ ದೃಶ್ಯ ಸೆರೆಯಾಗಿದೆ. ಕಬ್ಬಿಣದ ಬಾಗಿಲು ತೆರೆದು ಒಳಗೆ ಬಂದ ಆಕೆ ಗಣೇಶ ಮೂರ್ತಿ ಬಳಿ ಹೋಗಿರುವ ದೃಶ್ಯ ಸೆರೆಯಾಗಿದೆ.


