ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಭರ್ಜರಿ ಪ್ರದರ್ಶನದಿಂದ ಭಾರತ ತಂಡ ಏಕೈಕ ಟಿ-20 ವಿಶ್ವಕಪ್ ನ ಏಕೈಕ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್ ಗಳ ಜಯಭೇರಿ ಬಾರಿಸಿದೆ.
ಅಮೆರಿಕದ ನ್ಯೂಯಾರ್ಕ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 9 ವಿಕೆಟ್ ಗೆ 122 ರನ್ ಗಳಿಸಲಷ್ಟೇ ಶಕ್ತವಾಯಿತು.
ಮಧ್ಯಮ ವೇಗಿ ಅರ್ಷದೀಪ್ ಸಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ 41 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಕಂಗಲಾಯಿತು. ಮಧ್ಯಮ ಕ್ರಮಾಂಕದಲ್ಲಿ ಶಕೀಬ್ ಅಲ್ ಹಸನ್ (28) ಮತ್ತು ಮೊಹಮದುಲ್ಲಾ (40) 6ನೇ ವಿಕೆಟ್ ಗೆ 70 ರನ್ ಜೊತೆಯಾಟ ನಿಭಾಯಿಸಿದರು. ಇವರಿಬ್ಬರು ಬೇರ್ಪಡುತ್ತಿದ್ದಂತೆ ತಂಡ ನಾಟಕೀಯ ಕುಸಿತ ಕಂಡಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಉತ್ತಮ ಮೊತ್ತ ಕಲೆ ಹಾಕಿತು. ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ರಿಷಭ್ ಪಂತ್ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 53 ರನ್ ಗಳಿಸಿದರೆ, ಪಾಂಡ್ಯ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 40 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮ 23 ರನ್ ಗಳಿಸಿದರು.