ದೆಹಲಿಯ ಕೆಂಪುಕೋಟೆಯ ಮೇಲೆ ದಾಳಿ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಕಿಂಗ್ ಜಿಗ್ಮೆ ಸಿಂಗ್ಯಾ ವಾಂಗ್ ಚುಕ್ ಅವರ 70ನೇ ಜನ್ಮದಿನಚಾರಣೆ ಅಂಗವಾಗಿ ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಮಂಗಳವಾರ ಬೆಳಿಗ್ಗೆ ಭೂತಾನ್ ಗೆ ಬಂದಿಳಿದರು.
ಭೂತಾನ್ ತುಂಪುಗೆ ಬಂದಿಳಿದ ನಂತರ ಇಂಗ್ಲೀಷ್ ನಲ್ಲಿ ಭಾಷಣ ಮಾಡಿದ ಅವರು, ಇಂದು ನಾನು ತುಂಬಾ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. ತನ್ನವರನ್ನು ಕಳೆದುಕೊಂಡ ಕುಟುಂಬದವರ ನೋವು ನನಗೆ ಅರ್ಥವಾಗುತ್ತದೆ. ಇಡೀ ರಾಷ್ಟ್ರ ಇಂದು ಅವರೊಂದಿಗೆ ನಿಂತಿದೆ ಎಂದರು.
ಸಾಮಾನ್ಯವಾಗಿ ಹಿಂದಿಯಲ್ಲಿ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಪೆಹಲ್ಗಾಮ್ ದಾಳಿಯ ನಂತರ ಇಂಗ್ಲೀಷ್ ನಲ್ಲಿ ಮಾತನಾಡಿದ್ದ ಅವರು, ಕೆಲವೇ ದಿನಗಳಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ್ದರು. ನಂತರ ಇದೇ ಮೊದಲ ಬಾರಿ ಇಂಗ್ಲೀಷ್ ನಲ್ಲಿ ಭಾಷಣ ಮಾಡಿ ಉಗ್ರರಿಗೆ ಖಡಕ್ ಎಚ್ಚರಿಕೆ ನೀಡಿದರು.
ಉಗ್ರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಈ ಪಿತೂರಿ ಹಿಂದೆ ಯಾರಿದ್ದರೋ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.
ಕಾರು ಸ್ಫೋಟದಲ್ಲಿ ಮೃತಪಟ್ಟವರ ಪರವಾಗಿ ಇಡೀ ದೇಶ ನಿಲ್ಲಲಿದೆ. ತನಿಖೆ ನಡೆಸುತ್ತಿರುವ ಎಲ್ಲಾ ತನಿಖಾ ಸಂಸ್ಥೆಗಳ ಜೊತೆ ನಾನು ಸಂಪರ್ಕದಲ್ಲಿದ್ದೇನೆ. ಪ್ರತಿಯೊಂದು ಮಾಹಿತಿಯನ್ನೂ ಪಡೆಯುತ್ತಿದ್ದೇನೆ ಎಂದು ಅವರು ಹೇಳಿದರು.
ದೆಹಲಿಯ ಕೆಂಪುಕೋಟೆ ಸಮೀಪ ಕಾರು ಸ್ಫೋಟದಲ್ಲಿ 12ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.


