ಬಲಿಷ್ಠ ಪಾಕಿಸ್ತಾನ ತಂಡ ಟಿ-20 ವಿಶ್ವಕಪ್ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಸೂಪರ್ ಓವರ್ ನಲ್ಲಿ ಸೋಲುಂಡು ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಡಲ್ಲಾಸ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ ಅಮೆರಿಕ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿದ್ದರಿಂದ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು.
ಫಲಿತಾಂಶಕ್ಕಾಗಿ ನಡೆದ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 18 ರನ್ ಗಳಿಸಿತು. ಗೆಲ್ಲಲು 19 ರನ್ ಗಳಿಸಬೇಕಾಗಿದ್ದ ಪಾಕಿಸ್ತಾನ 5 ರನ್ ಗಳಿಂದ ಸೋಲುಂಡಿತು. ಈ ಮೂಲಕ 2024ರ ಟಿ-20 ವಿಶ್ವಕಪ್ ನಲ್ಲಿ ಮೊದಲ ಅಚ್ಚರಿ ಫಲಿತಾಂಶ ಹೊರಬಿದ್ದಿತು.
ಇದಕ್ಕೂ ಮುನ್ನ ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಅಮೆರಿಕ ನಾಯಕ ಮೊನಾಂಕ್ ಪಟೇಲ್ ಅವರ ಅರ್ಧಶತಕದ ನೆರವಿನಿಂದ ಸುಲಭ ಗೆಲುವಿನತ್ತ ಮುಖ ಮಾಡಿತ್ತು. ಮೊನಾಂಕ್ ಪಟೇಲ್ 38 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿದರು. ಅಲ್ಲದೇ ಎರಡನೇ ವಿಕೆಟ್ ಗೆ ಆಂಡ್ರಿಯಸ್ ಗೌಸ್ (35) ಜೊತೆ 68 ರನ್ ಜೊತೆಯಾಟ ನಿಭಾಯಿಸಿದರು.
ಏರಾನ್ ಜೋನ್ಸ್ ಅಜೇಯ 36 ರನ್ ಬಾರಿಸಿದರು. ಆದರೆ ಕೊನೆಗಳಿಗೆಯಲ್ಲಿ ಎಚ್ಚೆತ್ತ ಪಾಕಿಸ್ತಾನ ಬೌಲರ್ ಗಳು ಒತ್ತಡ ಹೇರಿದ್ದರಿಂದ ಅನನುಭವಿ ಅಮೆರಿಕ ಬ್ಯಾಟ್ಸ್ ಮನ್ ಗಳು ಗೆಲುವಿನ ರನ್ ಬಾರಿಸಲು ವಿಫಲರಾಗಿದ್ದರಿಂದ ಪಂದ್ಯ ಸೂಪರ್ ಓವರ್ ಪ್ರವೇಶಿಸಿತು.
ಪಾಕಿಸ್ತಾನ ತಂಡದ ಪರ ನಾಯಕ ಬಾಬರ್ ಅಜಮ್ (44) ಮತ್ತು ಶಬಾದ್ ಖಾನ್ (40), ಶಹೀನ್ ಶಾಹ್ ಅಫ್ರಿದಿ (28) ಮತ್ತು ಇಫ್ತಿಕಾರ್ ಅಹ್ಮದ್ (18) ಹೋರಾಟ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ವಿಫಲರಾದರು.