ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದ್ದರೂ ಎನ್ ಡಿಎ ಮೈತ್ರಿಕೂಟದ ಸಹಾಯದಿಂದ ಮೂರನೇ ಬಾರಿ ಸರ್ಕಾರ ರಚಿಸಿದೆ. ಸಂಸದರಾಗಿ ಆಯ್ಕೆಯಾದವರಿಗೆ ಸಿಗುವ ವೇತನ ಎಷ್ಟು? ಅವರಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬ ವಿವರ ಇಲ್ಲಿದೆ.
ಮಾಸಿಕ ವೇತನ
ಸಂಸದರ ಮಾಸಿಕ ವೇತನ 1,00,000 ರೂ. ಆಗಿದೆ. ಹಣದುಬ್ಬರ ಮತ್ತು ಬೆಲೆ ಏರಿಕೆ ಆಧರಿಸಿ 2018ರಲ್ಲಿ ಸಂಸದರ ವೇತನ ಪರಿಷ್ಕರಿಸಲಾಗಿದೆ.
ಕ್ಷೇತ್ರ ಭತ್ಯೆ
ಕಚೇರಿ ನಿರ್ವಹಣೆ, ತಮ್ಮ ಲೋಕಸಭಾ ಕ್ಷೇತ್ರದ ಸುತ್ತಾಟ ಸೇರಿದಂತೆ ಇತರೆ ವೆಚ್ಚಗಳಿಗಾಗಿ ಸಂಸದರು ಕ್ಷೇತ್ರದ ಭತ್ಯೆಯಾಗಿ ಮಾಸಿಕ 70 ಸಾವಿರ ರೂ. ಪಡೆಯುತ್ತಾರೆ.
ಕಚೇರಿ ನಿರ್ವಹಣೆ
ಕಚೇರಿಯ ಸಿಬ್ಬಂದಿ, ಟೆಲಿ ಕಮ್ಯುನಿಕೇಷನ್, ಪೀಠೋಪಕಣ ಮುಂತಾದ ಕಚೇರಿ ನಿರ್ವಹಣೆಗಾಗಿ ಮಾಸಿಕ 60,000 ರೂ. ಭತ್ಯೆ ಪಡೆಯಲಾಗುತ್ತದೆ.
ದೈನಂದಿನ ಭತ್ಯೆ
ಸಂಸತ್ ಭವನ ಹಾಗೂ ಸಂಸದರ ಸಭೆ ಮುಂತಾದವುಗಳಿಗಾಗಿ ರಾಜಧಾನಿ ದೆಹಲಿಗೆ ಭೇಟಿ ನೀಡಿದಾಗ ವಸತಿ, ಆಹಾರ ಮುಂತಾದ ಖರ್ಚುಗಳಿಗಾಗಿ ಪ್ರತಿದಿನ 2000 ರೂ. ದೈನಂದಿನ ಭತ್ಯೆ ನೀಡಲಾಗುತ್ತದೆ.
ಸಾರಿಗೆ ವೆಚ್ಚ
ಸಂಸದರು ಮತ್ತು ಅವರ ಹತ್ತಿರದ ಸಂಬಂಧಿಕರು ಒಂದು ವರ್ಷದಲ್ಲಿ 34 ಬಾರಿ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಬಹುದಾಗಿದೆ. ರೈಲುಗಳಲ್ಲಿ ಕೆಲಸದ ನಿಮಿತ್ತ ಅಥವಾ ವೈಯಕ್ತಿಕ ಕೆಲಸಗಳಿಗೂ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಬಹುದು. ಕ್ಷೇತ್ರದಲ್ಲಿ ಪ್ರಯಾಣಿಸಿದರೆ ಎಷ್ಟು ಬೇಕಾದರೂ ಪ್ರಯಾಣ ಭತ್ಯೆಯನ್ನು ಪಡೆಯಬಹುದು.
ವಸತಿ ಸೌಲಭ್ಯ
ಸಂಸದರು ಪ್ರತಿಷ್ಠಿತ ಬಡಾವಣೆಯಲ್ಲಿ ತಮ್ಮ 5 ವರ್ಷಗಳ ಅವಧಿಯಲ್ಲಿ ನಗರದ ಪ್ರಮುಖ ಬಡಾವಣೆಯಲ್ಲಿ ಐಷಾರಾಮಿ ಅಥವಾ ಬೃಹತ್ ಬಂಗಲೆಯಲ್ಲಿ ಉಚಿತವಾಗಿ ವಾಸಿಸಬಹುದು. ಇದರ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ. ಒಂದು ವೇಳೆ ಬಂಗಲೆ ಅಥವಾ ಮನೆ ಬೇಡ ಅಂತ ನಿರಾಕರಿಸಿದರೆ, ಮಾಸಿಕ 2 ಲಕ್ಷ ರೂ. ವಸತಿ ಭತ್ಯೆಯಾಗಿ ಪಡೆಯಬಹುದು.
ವೈದ್ಯಕೀಯ ಸೌಲಭ್ಯ
ಸಂಸದರು ಹಾಗೂ ಅವರ ಹತ್ತಿರದ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರಿ ವೈದ್ಯಕೀಯ ಸೇವೆ ಯೋಜನೆಯಡಿ ಸರ್ಕಾರಿ ಅಥವಾ ಆಯ್ದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.
ಪಿಂಚಣಿ
ಸಂಸದರು 5 ವರ್ಷ ಸೇವೆ ಸಲ್ಲಿಸಿದ್ದಕ್ಕಾಗಿ ಮಾಸಿಕ 25 ಸಾವಿರ ರೂ. ಮಾಸಿಕ ಪಿಂಚಣಿ ಪಡೆಯಲಿದ್ದಾರೆ. 5 ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸಿದ್ದರಿಂದ ಒಂದು ವರ್ಷಕ್ಕೆ ಹೆಚ್ಚುವರಿ 2,000 ರೂ. ಭತ್ಯೆ ಪಡೆಯುತ್ತಾರೆ.
ದೂರವಾಣಿ ಸಂಪರ್ಕ
ಸಂಸದರು ಮಾಸಿಕ 1,50,000 ಉಚಿತ ಕರೆ ಮಾಡಬಹುದಾಗಿದೆ. ಅಲ್ಲದೇ ಅವರ ಮನೆ ಹಾಗೂ ಕಚೇರಿಗೆ ಅತ್ಯಂತ ವೇಗದ ಹಾಗೂ ಉತ್ತಮ ಗುಣಮಟ್ಟದ ಅನ್ ಲಿಮಿಟೆಡ್ ಇಂಟರ್ ನೆಟ್ ಸೇವೆ ಪಡೆಯಬಹುದಾಗಿದೆ.
ನೀರು ಮತ್ತು ವಿದ್ಯುತ್ ಉಚಿತ
ಸಂಸದರು ವಾರ್ಷಿಕ 50 ಸಾವಿರ ಯೂನಿಟ್ ವಿದ್ಯುತ್ ಮತ್ತು 4000 ಲೀಟರ್ ಉಚಿತ ಶುದ್ಧ ಕುಡಿಯುವ ನೀರು ಪಡೆಯಬಹುದು.