ತಮಿಳುನಾಡಿನಲ್ಲಿ ನಡೆದ ಮೊದಲ ಹಂತದ ಪರಿಷ್ಕರಣೆ ಮುಕ್ತಾಯದ ನಂತರ ಮತದಾರರ ಪಟ್ಟಿಯಿಂದ 97 ಲಕ್ಷ ಮತದಾರರನ್ನು ಕೈಬಿಡಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಈ ವಿಷಯ ತಿಳಿಸಿದ್ದು, ಮತದಾರರ ಪಟ್ಟಿ ಪರಿಷ್ಕರಣೆಗೂ ಮುನ್ನ ರಾಜ್ಯದಲ್ಲಿ 6.41 ಕೋಟಿ ಮತದಾರರು ಇದ್ದರು. ಇದೀಗ 5.43 ಕೋಟಿ ಮತದಾರರು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದೆ.
ತೆಗೆದು ಹಾಕಲಾದ 97 ಲಕ್ಷ ಮತದಾರರ ಪೈಕಿ 27 ಲಕ್ಷ ಮತದಾರರು ಮೃತಪಟ್ಟಿದ್ದಾರೆ. 66 ಲಕ್ಷ ಮತದಾರರು ರಾಜ್ಯ ತೊರೆದವರದ್ದು ಆಗಿದೆ. 3.4 ಲಕ್ಷ ಮತದಾರರು ಎರಡು ಬಾರಿ ನೋಂದಣಿ ಮಾಡಿಕೊಂಡವರದ್ದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆ ನಡೆಯಲಿರುವ ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಇನ್ನಿತರೆ ರಾಜ್ಯಗಳಲ್ಲಿ ಡಿಸೆಂಬರ್ 16ರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೋಯಮತ್ತೂರುವೊಂದರಲ್ಲೇ 6.5 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಕೋಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ 6 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 5 ಕ್ಷೇತ್ರಗಳಲ್ಲಿ ಎಐಎಡಿಎಂಕೆ ಗೆದ್ದಿದ್ದರೆ, ಒಂದು ಕ್ಷೇತ್ರದಲ್ಲಿ ಮಿತ್ ಪಕ್ಷ ಬಿಜೆಪಿ ಗೆದ್ದಿದೆ.
ನಂತರ ಅತೀ ಹೆಚ್ಚು ಮತದಾರರು ಡಿಲಿಟ್ ಆದ ಕ್ಷೇತ್ರ ಕಾಂಚಿಪುರಂ. ಈ ಕ್ಷೇತ್ರದಲ್ಲಿ ಡಿಎಂಕೆ ಮತ್ತು ವಿಸಿಕೆ ಪಕ್ಷಗಳು ಮೈಲುಗೈ ಸಾಧಿಸಿವೆ. ಕರೂರಿನಲ್ಲಿ ಅಂದಾಜಿ 80,000 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಕ್ಷೇತ್ರದಲ್ಲಿ ಇತ್ತೀಚೆಗೆ ನಟ ವಿಜಯ್ ಚುನಾವಣಾ ರ್ಯಾಲಿ ವೇಳೆ ಕಾಲ್ತುಳಿತ ದುರಂತದಲ್ಲಿ 40 ಮಂದಿ ಅಸುನೀಗಿದ್ದರು. ಈ ಕ್ಷೇತ್ರದಲ್ಲಿ ಡಿಎಂಕೆ 5 ಮತ್ತು 1ರಲ್ಲಿ ಎಐಎಡಿಎಂಕೆ ಗೆದ್ದಿದೆ.
ರಾಜಧಾನಿ ಚೆನ್ನೈನಲ್ಲಿ 22 ಕ್ಷೇತ್ರಗಳುಇದ್ದು, 26 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.


