ವಿಚ್ಚೇದನ ನೋಟಿಸ್ ಕಳುಹಿಸಿದ್ದಕ್ಕಾಗಿ ಪತ್ನಿಗೆ ಗುಂಡಿಕ್ಕಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪತಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಂಗಳವಾರ ಸಂಜೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೆಲಸ ಮುಗಿಸಿ ಮನೆಗೆ ಬಂದಿದ್ದ ಮಹಿಳೆಗೆ 4 ಬಾರಿ ಗುಂಡು ಹಾರಿಸಿ ಪತಿ ಕೊಲೆ ಮಾಡಿದ್ದಾನೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಸವೇಶ್ವರನಗರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭುವನೇಶ್ವರಿ (39) ಮೃತಪಟ್ಟಿದ್ದು, ಟ್‌ಫೀಲ್ಡ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪತಿ ಬಾಲಮುರುಗನ್ (40) ಬಂಧಿತ ಆರೋಪಿ.
14 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ಮಕ್ಕಳಿದ್ದು, ರಾಜಾಜಿನಗರದಲ್ಲಿ ವಾಸವಾಗಿದ್ದರು. ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ, ಕಳೆದ ಒಂದೂವರೆ ವರ್ಷದಿಂದ ಬೇರ್ಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯು ಪತ್ನಿಯ ಮೇಲೆ ಅನುಮಾನಪಡುತ್ತಿದ್ದ. ಇದರಿಂದ ನೊಂದ ಪತ್ನಿ ಕಾನೂನಾತ್ಮಕವಾಗಿ ವಿಚ್ಛೇದನ ನೀಡುವಂತೆ ಕೇಳಿದ್ದಳು. ಆದರೆ ಇದಕ್ಕೆ ಆರೋಪಿ ಒಪ್ಪಿರಲಿಲ್ಲ. ನಂತರ ಪತ್ನಿ ಕಳೆದ 6 ತಿಂಗಳ ಹಿಂದೆ ಬೇರೆ ಕಡೆಗೆ ವರ್ಗಾವಣೆ ಪಡೆದು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು. ಆರೋಪಿಗೆ ಪತ್ನಿ ಮಕ್ಕಳು ಎಲ್ಲಿದ್ದಾರೆ ಎಂಬ ಮಾಹಿತಿಯೇ ಇರಲಿಲ್ಲ.
ಕಳೆದ 4 ತಿಂಗಳ ಹಿಂದೆ ಭುವನೇಶ್ವರಿ ಕೆ.ಪಿ.ಅಗ್ರಹಾರದ ಚೋಳರಪಾಳ್ಯಕ್ಕೆ ಬಂದು ಮಕ್ಕಳೊಂದಿಗೆ ನೆಲೆಸಿದ್ದರು. ಒಂದು ವಾರದ ಹಿಂದೆ ಆರೋಪಿಗೆ ವಿಚ್ಛೇದನದ ನೋಟಿಸ್ ಕಳುಹಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಯು ತನ್ನ ಹೆಂಡತಿ ಕಚೇರಿಯಿಂದ ಮನೆಗೆ ಬರುವ ದಾರಿಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಕಾಯುತ್ತಿದ್ದ. ಪತ್ನಿ ಚೋಳರಪಾಳ್ಯದ ಮನೆ ಸಮೀಪದ ರಸ್ತೆಗೆ ಬರುತ್ತಿದಂತೆ ಆಕೆಯ ಮೇಲೆ ಏಕಾಏಕಿ ಐದು ಸುತ್ತು ಗುಂಡು ಹಾರಿಸಿದ್ದಾನೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಗುಂಡು ಹಾರಿಸಿ ಪತ್ನಿಯನ್ನು ಕೊಂದ ಬಳಿಕ ಆರೋಪಿಯು ನೇರವಾಗಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಬಂದು, ನಾನು ನನ್ನ ಹೆಂಡತಿಯನ್ನು ಗುಂಡು ಹಾರಿಸಿ ಕೊಂದಿದ್ದೇನೆ ಎಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಆರೋಪಿಯು ಪಿಸ್ತೂಲ್ ಅನ್ನು ಅಕ್ರಮವಾಗಿ ತರಿಸಿಕೊಂಡಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಎಫ್‌ಎಸ್ಎಲ್ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಮಾಗಡಿ ರಸ್ತೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.


