ವಿಧಾನಸಭೆಯಲ್ಲಿ ಸರ್ಕಾರದ ಭಾಷಣ ಮಾಡದೇ ರಾಜ್ಯಪಾಲರ ವಿರುದ್ಧ ಕಾನೂನು ಸಮರ ಹೂಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ತಜ್ಞರ ಜೊತೆ ಮಾತುಕತೆ ನಡೆಸಿದೆ.
ವರ್ಷದ ಮೊದಲ ಜಂಟಿ ವಿಧಾನಸಭೆ ಅಧಿವೇಶನದಲ್ಲಿ ಎರಡು ಸಾಲಿನಲ್ಲಿ ಭಾಷಣ ಮುಗಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ರಾಜ್ಯ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಾನೂನು ಸಚಿವ ಹೆಚ್.ಕೆ. ಪಾಟೀಲ್ ರಾಜ್ಯಪಾಲರು ತೆರಳಿದ ನಂತರ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯಪಾಲರು ಸಂವಿಧಾನಕ್ಕೆ ಅಗೌರವ ತೋರಿದ್ದು ಮಾತ್ರವಲ್ಲದೇ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಶಿಷ್ಟಾಚಾರದ ಪ್ರಕಾರ ರಾಜ್ಯಪಾಲರು ಭಾಷಣ ಮಾಡಿದ ನಂತರ ರಾಷ್ಟ್ರಗೀತೆ ಮೊಳಗುತ್ತದೆ. ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ನಂತರ ಅವರು ಮರಳಬೇಕಿತ್ತು. ಆದರೆ ಎರಡು ಸಾಲಿನಲ್ಲಿ ಭಾಷಣ ಮಾಡಿ ರಾಷ್ಟ್ರಗೀತೆ ಮೊಳಗುವ ಮುನ್ನವೇ ವಿಧಾನಸಭೆಯಿಂದ ಹೊರನಡೆದಿದ್ದಾರೆ. ಈ ಮೂಲಕ ರಾಷ್ಟ್ರಗೀತೆಗೆ ಅಪಮಾನ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ವಿಧಾನಸಭೆ ಹೊರಗೆ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದು, ಅವರ ವಿರುದ್ಧ ಕಾನೂನು ಸಮರ ಹೂಡುವ ಬಗ್ಗೆ ಕಾನೂನು ಸಚಿವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದರು.
ಸಚಿವ ಸಂಪುಟ ಸಭೆಯಲ್ಲಿ ಚರ್ಚೆ
ರಾಜ್ಯಪಾಲರ ನಡೆಯ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಸಿಎಂ ನೇತೃತ್ವದ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳುವಂತೆ ಡಿಮ್ಯಾಂಡ್ ಮಾಡಲಾಗಿದೆ. ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಸುಲಭವಾಗಿ ವಿಷಯವನ್ನ ನಾವು ಬಿಡಬಾರದು ಎಂಬುದಾಗಿ ಹೇಳಲಾಗಿದೆ.
ರಾಜ್ಯಪಾಲರೇ ಸಂಘರ್ಷ ಶುರು ಮಾಡಿದ್ದಾರೆ. ಅವರಿಂದಲೇ ಕಾರ್ಯಲೋಪಗಳಾಗಿವೆ. ಹೀಗಾಗಿ ರಾಜ್ಯಪಾಲರ ವಿರುದ್ದ ಗೋ ಬ್ಯಾಕ್ ನಿರ್ಣಯ? ಕಾನೂನು ತಜ್ಙರ ಸಲಹೆ ಪಡೆದು ಮುಂದುವರೆಯಲು ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗುತ್ತಿದೆ. ರಾಷ್ಟ್ರಪತಿಗೆ ಪತ್ರ ಬರೆಯುವ ಬಗ್ಗೆ ಕ್ಯಾಬಿನೆಟ್ ಸಿಎಂ ವಿವೇಚನೆಗೆ ಬಿಟ್ಟಿದೆ ಎಂದು ಹೇಳಲಾಗಿದೆ.
ಅಡ್ವೋಕೇಟ್ ಜನರಲ್ ದೆಹಲಿಗೆ ದೌಡು
ಇದೇ ವೇಳೆ ರಾಜ್ಯಪಾಲರ ವಿರುದ್ಧ ಕಾನೂನು ಸಮರ ಹೂಡುವ ಕುರಿತು ತಜ್ಞರ ಜೊತೆ ಚರ್ಚಿಸುವ ಕುರಿತು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ದೆಹಲಿಗೆ ದೌಡಾಯಿಸಿದ್ದಾರೆ.
ದೆಹಲಿಯಲ್ಲಿ ಹಿರಿಯ ವಕೀಲರ ಜೊತೆ ಚರ್ಚಿಸಿದ ನಂತರ ಸಿಎಂಗೆ ಮಾಹಿತಿ ನೀಡಲಿದ್ದು, ನಂತರ ಜನವರಿ 28ರಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.



