ಬೆಂಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ಕ್ರಮಗಳನ್ನು ತೀವ್ರಗೊಳಿಸಲಾಗಿದ್ದು, 1,849 ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ತಪಾಸಣೆ ನಡೆಸಲಾಗಿದೆ ಮತ್ತು 2,400ಕ್ಕೂ ಹೆಚ್ಚು ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಆಹಾರದ ನೈರ್ಮಲ್ಯ ಮತ್ತು ಸುರಕ್ಷತೆಯ ಖಾತ್ರಿಗಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ರಾಜ್ಯಾದ್ಯಂತ ವಿಶೇಷ ಜಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಸೋಮವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿರುವ 629 ಹೋಟೆಲ್‌ಗಳಲ್ಲಿ ರಾಜ್ಯಾದ್ಯಂತ ಪರಿಶೀಲನೆ ನಡೆಸಲಾಗಿದೆ. ಈ ವೇಳೆ 1,860 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 331 ಹೋಟೆಲ್‌ಗಳಲ್ಲೂ ಪರಿಶೀಲನೆ ನಡೆಸಲಾಗಿದ್ದು, ಅಲ್ಲಿಂದ 556 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
186 ಬಸ್ ನಿಲ್ದಾಣಗಳಲ್ಲಿರುವ 889 ಆಹಾರ ಮಾರಾಟ ಮಳಿಗೆಗಳು/ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಲಾಯಿತು. ಅಶುಚಿತ್ವದ ಪರಿಸ್ಥಿತಿ ಕಂಡುಬಂದ 206 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, ಸ್ಥಳದಲ್ಲೇ ಒಟ್ಟು 55,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಸಚಿವರು ಹೇಳಿದರು.
ಮೇಲ್ವಿಚಾರಣೆ ಬಿಗಿ:
ರಾಜ್ಯಾದ್ಯಂತ ಆಹಾರ ಮತ್ತು ಔಷಧ ಸುರಕ್ಷತಾ ಮೇಲ್ವಿಚಾರಣೆಯನ್ನು ಬಿಗಿಗೊಳಿಸಲಾಗುವುದು ಎಂದ ಸಚಿವರು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಿಬ್ಬಂದಿಯ ಕೆಲಸವನ್ನು ಶ್ಲಾಘಿಸಿ, ಅಭಿನಂದಿಸಿದರು.
ಇತ್ತೀಚೆಗೆ ರಾಜ್ಯಾದ್ಯಂತ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಿಬ್ಬಂದಿ ಹೋಟೆಲ್ಗಳು, ಗೋದಾಮುಗಳು ಮತ್ತು ಇತರೆ ಸಂಸ್ಥೆಗಳಲ್ಲಿ ತಪಾಸಣೆ ನಡೆಸಿದ್ದು, ಈ ವೇಳೆ ನೈರ್ಮಲ್ಯ ಉಲ್ಲಂಘನೆ, ಅಸುರಕ್ಷಿತ ಆಹಾರ ಮಾದರಿಗಳು, ಅವಧಿ ಮೀರಿದ ಉತ್ಪನ್ನಗಳು ಮತ್ತು ಲೇಬಲಿಂಗ್ ವೈಫಲ್ಯಗಳು ಕಂಡುಬಂದಿದ್ದವು.
ಕ್ಯೂ ಆರ್ ಕೋಡ್:
ಸರ್ಕಾರಿ ಅಧಿಕಾರಿಗಳು ಆಡಳಿತದ ಸಾರ್ವಜನಿಕ ಮುಖವಾಗಿದ್ದಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ, ಸರ್ಕಾರವು ಜನರ ವಿಶ್ವಾಸವನ್ನು ಗಳಿಸುತ್ತದೆ. ಅವರ ಕೆಲಸವನ್ನು ಗುರುತಿಸಲು ಮತ್ತು ಭವಿಷ್ಯದ ಜಾರಿಯಲ್ಲಿ ಅವರನ್ನು ಬೆಂಬಲಿಸಲು ನಾವು ಬಯಸುತ್ತೇವೆ” ಎಂದು ಅವರು ಹೇಳಿದರು.
ಇಲಾಖೆಯಿಂದ ಇ-ಆಡಳಿತ ಕೇಂದ್ರದ ಸಹಭಾಗಿತ್ವದಲ್ಲಿ ಕ್ಯೂಆರ್ ಕೋಡ್ ಆಧಾರಿತ ಇಂಟಿಗ್ರೇಟೆಡ್ ಪಬ್ಲಿಕ್ ಗ್ರೀವೆನ್ಸ್ ರಿಡ್ರೆಸಲ್ ಸಿಸ್ಟಮ್ ಅನ್ನು ಪರಿಚಯಿಸಲಾಗಿದೆ. ಅವಧಿ ಮೀರಿದ ಅಥವಾ ಅಧಿಕ ಬೆಲೆಯ ಔಷಧಿಗಳು, ಪ್ರತಿಕೂಲ ಔಷಧ ಪ್ರತಿಕ್ರಿಯೆಗಳು, ಫಾರ್ಮಸಿ ಸೇವೆಗಳು, ಆಹಾರ ಮಳಿಗೆಗಳಲ್ಲಿ ಕಳಪೆ ನೈರ್ಮಲ್ಯ, ಕೃತಕ ಬಣ್ಣಗಳು ಮತ್ತು ಇತರ ಉಲ್ಲಂಘನೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಮತ್ತು ಟ್ರ್ಯಾಕ್ ಮಾಡಲು ನಾಗರಿಕರು ಈ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಡಿ.ಫಾರ್ಮಸಿ ವಿದ್ಯಾರ್ಥಿಗಳಿಗಾಗಿ ಇ-ಪ್ರಮಾಣಪತ್ರ ಸೇವೆಯನ್ನು ಸಹ ಪ್ರಾರಂಭಿಸಲಾಗಿದೆ.
ಟೋಲ್-ಫ್ರೀ ಸೌಲಭ್ಯ:
ಭಾರತದಲ್ಲಿ ಆಹಾರ ಮತ್ತು ಔಷಧ ಸುರಕ್ಷತೆಗಾಗಿ ಆರಭಿಸಲಾಗಿರುವ ಮೊದಲ ಕ್ಯೂ ಆರ್ ಕೋಡ್ ಉಪಕ್ರಮ ಇದಾಗಿದೆ. ಇದರ ಮೂಲಕ ಸ್ವೀಕರಿಸುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ನಾಗರಿಕರು ದೂರುಗಳನ್ನು ಸಲ್ಲಿಸಲು ಅವಕಾಶ ನೀಡುವ ಟೋಲ್-ಫ್ರೀ ಸೌಲಭ್ಯವನ್ನು ಸಹ ಯೋಜಿಸಲಾಗಿದೆ ಎಂದು ಖಾದರ್ ಹೇಳಿದರು.



