ಕಾಂಗ್ರೆಸ್ ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.13ರಷ್ಟು ಹೆಚ್ಚು ಮತಗಳು ಬಂದಿವೆ. ಆದರೆ ನಿರೀಕ್ಷಿತ ಸ್ಥಾನ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾವು ನಿರೀಕ್ಷಿಸಿದಷ್ಟು ಸ್ಥಾನ ಸಿಕ್ಕಿಲ್ಲ. ಆದರೆ ಮತಗಳ ಪ್ರಮಾಣದಲ್ಲಿ ಶೇ.13ರಷ್ಟು ಹೆಚ್ಚಳ ಆಗಿದೆ. ಈ ಬಗ್ಗೆ ಪಕ್ಷದ ಸಭೆಯಲ್ಲಿ ಆತ್ಮಾವಲೋಕನ ಮಾಡಲಾಗುವುದು ಎಂದರು.
ಪಕ್ಷ ನಿರೀಕ್ಷಿತ ಸ್ಥಾನ ಯಾಕೆ ಬಂದಿಲ್ಲ ಎಂಬ ಬಗ್ಗೆ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಪಕ್ಷದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ಚುನಾವಣೆಯಲ್ಲಿ ಕಳಪೆ ಸಾಧನೆ ಎಂದು ಹೇಗೆ ಹೇಳುತ್ತೀರಿ? ಕಳೆದ ಬಾರಿ 1 ಸ್ಥಾನ ಬಂದಿತ್ತು. ಈ ಬಾರಿ 9 ಬಂದಿದೆ. ನಾವು ಉತ್ತಮ ಸಾಧನೆ ಮಾಡಿದ್ದೇವೆ. ಆದರೆ ನಿರೀಕ್ಷಿತ ಸ್ಥಾನ ಬಂದಿಲ್ಲ ಅಷ್ಟೆ ಎಂದು ಅವರು ಸಮರ್ಥಿಸಿಕೊಂಡರು.
ನಟ ದರ್ಶನ್ ಪ್ರಕರಣದಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಪೊಲೀಸರು ಠಾಣೆಯ ಮುಂದೆ ಶಾಮಿಯಾನ ಯಾಕೆ ಹಾಕಿದ್ದಾರೆ ಗೊತ್ತಿಲ್ಲ. ಇದರಿಂದ ತೊಂದರೆ ಆಗಿದೆ ಅಂತ ಯಾರೂ ದೂರು ನೀಡಿಲ್ಲ. ದೂರು ಬಂದರೆ ಗಮನ ಹರಿಸುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಯತ್ನ ಮಾಡಲ್ಲ ಎಂದು ಸಿದ್ದರಾಮಯ್ಯ ದರ್ಶನ್ ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷ ಕಾನೂನು ಹೇಳಿದಂತೆ ನಡೆಯುತ್ತದೆ. ನಮ್ಮ ಸರ್ಕಾರ ಕಾನೂನಿಗೆ ವಿರುದ್ಧವಾಗಿ ಯಾವುದನ್ನೂ ಮಾಡುವುದಿಲ್ಲ. ಯಾರನ್ನು ರಕ್ಷಿಸುವುದಿಲ್ಲ. ಅಥವಾ ಯಾರ ಮೇಲೂ ದ್ವೇಷ ರಾಜಕಾರಣ ಮಾಡಲ್ಲ ಎಂದು ಅವರು ಸ್ಪಷ್ಟಪಡಿಸಿದರು.