ತೆಂಗಿನಕಾಯಿಗೆ ಇರುವಷ್ಟು ಮಹತ್ವ ವಿಳ್ಯೇದೆಲೆಗೂ ಇದೆ. ವಿಳ್ಯೇದೆಲೆಯನ್ನು ಶುಭ-ಸಮಾರಂಭಗಳಿಗೆ ಶುಭದ ಪ್ರತೀಕವೆಂದು ಉಪಯೋಗಿಸುತ್ತಾರೆ. ಊಟದ ನಂತರ ನಮ್ಮ ಹಿರಿಯರು ವಿಳ್ಯೇದೆಲೆಯನ್ನು ಜಗಿಯುತ್ತಿದ್ದರು ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಎಂಬ ನಂಬಿಕೆಯೂ ಇದೆ. ವಿಳ್ಯೇದೆಲೆಯು ಅತೀ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ.
ವಿಳ್ಯೇದೆಲೆ, ತುಳಸಿ ಎಲೆಯನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಮಕ್ಕಳಿಗೆ ಕೊಟ್ಟರೆ ನೆಗಡಿ ಕಡಿಮೆ ಆಗುತ್ತದೆ. ಕಫದ ತೊಂದರೆಯಿಂದ ಬಳಲುತ್ತಿರುವವರು ಎಲೆ, ಮೆಣಸು, ಉಪ್ಪು ಅರೆದು ತಿನ್ನುವುದರಿಂದ ಕಫ ನಿವಾರಣೆಯಾಗುತ್ತದೆ.
ಅಸ್ತಮಾದಿಂದ ಬಳಲುತ್ತಿರುವವರು ವಿಳ್ಯೇದೆಲೆ, ತುಳಸಿ, ಲವಂಗ ಸ್ವಲ್ಪ ಪಚ್ಚ ಕರ್ಪೂರ ಇಟ್ಟು ಚೆನ್ನಾಗಿ ಅಗಿದು ಬಳಲುವಿಕೆ ಕಡಿಮೆಯಾಗುತ್ತದೆ. ಮಕ್ಕಳು ಹೊಟ್ಟೆ ಉಬ್ಬರದಿಂದ ನೋವನ್ನು ಅನುಭವಿಸುತ್ತಿದ್ದರೆ, ಹರಳೆಣ್ಣೆ ಸವರಿದ ವಿಳ್ಯೇದೆಲೆಯನ್ನು ಶಾಖಕ್ಕೆ ಹಿಡಿದು ಬಿಸಿ ಮಾಡಿ ಹೊಟ್ಟೆ ಶಾಖ ಕೊಡುವುದರಿಂದ ಹೊಟ್ಟೆ ಉಬ್ಬರದ ನಿಯಂತ್ರಣಕ್ಕೆ ಬರುತ್ತದೆ.
ತಲೆಯಲ್ಲಿ ಹೊಟ್ಟಿನ ಸಮಸ್ಯೆ ಕಾಡುತ್ತಿದ್ದರೆ, ವಿಳ್ಯೇದೆಲೆಯನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ತಲೆಗೆ ಹಚ್ಚುವುದರಿಂದ ಹೊಟ್ಟು ಸುಲಿಯುವುದು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.
ಬಾಯಿಯಲ್ಲಿ ದುರ್ಗಂಧ ಬರುತ್ತಿದ್ದರೆ ವಿಳ್ಯೇದೆಲೆಗಳನ್ನು ನೀರಿನಲ್ಲಿ ಕುದಿಸಿ, ಬಾಯಿ ಮುಕ್ಕಳಿಸಬೇಕು ಇದರಿಂದ ಬಾಯಿಯ ವಾಸನೆ ನಿಲ್ಲುತ್ತದೆ. ವೀಳ್ಯೆದೆಲೆಯನ್ನು ಕೆಂಡದ ಮೇಲೆ ಬಿಸಿ ಮಾಡಿ ಹಣೆಗೆ ಶಾಖ ಕೊಡುತ್ತಿದ್ದರೆ ತಲೆನೋವು ಹೋಗುತ್ತದೆ.