ಮಧ್ಯಪ್ರಾಚ್ಯದ ಯುದ್ಧ ನಿಲ್ಲುವ ಬದಲು ಮತ್ತಷ್ಟು ತೀಕ್ಷ್ಣಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸೋಮವಾರ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡಿದ್ದು, ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರು 10 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಸೋಮವಾರ ಬಾಂಬೆ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಆರಂಭವಾದ ಕೆಲವೇ ಗಂಟೆಗಳಲ್ಲಿ ಶೇ.2ರಷ್ಟು ಷೇರುಗಳು ತಮ್ಮ ಮೌಲ್ಯ ಕಳೆದುಕೊಂಡಿತು. ಬಂಡವಾಳ ವಾಪಸ್ ಪಡೆಯಲು ಹೂಡಿಕೆದಾರರು ಮುಂದಾಗಿದ್ದರಿಂದ ಸಂವೇದಿ ಸೂಚ್ಯಂಕ ಕುಸಿತ ಕಂಡಿತು.
ಸೆನ್ಸೆಕ್ಸ್ 1,635(-2.22%) ಅಂಕ ಕುಸಿದು 82.497.1ರಲ್ಲಿ ಕೊನೆಯಾದರೆ ನಿಫ್ಟಿ 488 (-2.1%) ಅಂಕ ಇಳಿಕೆಯಾಗಿ 22,331.40 ರಲ್ಲಿ ಕೊನೆಯಾಯಿತು. ಬ್ಯಾಂಕ್ ನಿಫ್ಟಿ 1,999.25(-3.82%) ಅಂಕ ಕುಸಿದು 50,275.35 ರಲ್ಲಿ ವ್ಯವಹಾರ ಮುಗಿಸಿದೆ.
95 ದಾಟಿದ ರೂಪಾಯಿ ಮೌಲ್ಯ!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಧ್ಯಪ್ರವೇಶದ ಹೊರತಾಗಿಯೂ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 95 ರೂ. ಗಡಿ ದಾಟಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿತ ಕಾಣುತ್ತಲೇ ಇದ್ದು, ಸೋಮವಾರ ಸಾರ್ವಕಾಲಿಕ ದಾಖಲೆಯ 95ರ ಗಡಿ ದಾಟಿದೆ.
ರೂಪಾಯಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿದ್ದ ಆರ್ ಬಿಐ, ಬ್ಯಾಂಕ್ ಗಳು ವ್ಯವಹಾರ ನಂತರ ಪ್ರತೀ ದಿನದ ಅಂತ್ಯಕ್ಕೆ ತಮ್ಮ ನೆಟ್ ಓಪನ್ ಪೊಸಿಷನ್ ಇನ್ ರುಪಿ ಮಿತಿಯನ್ನು 100 ಮಿಲಿಯನ್ ಡಾಲರ್ ಗೆ ಮಿತಿಗೊಳಿಸಿ ಏಪ್ರಿಲ್ 10 ರವರೆಗೆ ಕಾಯ್ದುಕೊಳ್ಳುವಂತೆ ಸೂಚಿಸಿತ್ತು.
ಆರ್ಬಿಐ ಈ ನಿರ್ಧಾರದ ಬೆನ್ನಲ್ಲೇ ರೂಪಾಯಿ ಮೌಲ್ಯ ಸೋಮವಾರ ಬೆಳಗ್ಗೆ ಸುಮಾರು 1 ರೂಪಾಯಿ 30 ಪೈಸೆ ಏರಿಕೆಯಾಗಿ 93.59 ಕ್ಕೆ ತಲುಪಿದ ನಂತರ ರೂಪಾಯಿ ಮೌಲ್ಯ ಕುಸಿಯಲು ಆರಂಭವಾಯಿತು. ಮಧ್ಯಾಹ್ನ 3 ಗಂಟೆಯ ವೇಳೆಗೆ 1 ಡಾಲರ್ ಮುಂದೆ 95.13 ರೂ.ಗೆ ತಲುಪಿತು. ಡಾಲರ್ ಮುಂದೆ ರೂಪಾಯಿ ಮೌಲ್ಯ 95 ಡಾಲರ್ಗೆ ಕುಸಿದಿರುವುದು ಇದೇ ಮೊದಲು.



