ನವದೆಹಲಿ: 2070ರ ವೇಳೆಗೆ ಭಾರತದಲ್ಲಿ ಹಿಂದೂ ಜನಸಂಖ್ಯೆ ಪ್ರಮಾಣದಲ್ಲಿ ಕುಸಿತ ಕಂಡು ಬರಲಿದ್ದರೆ, ಮುಸ್ಲಿಮರ ಜನ ಸಂಖ್ಯೆಯಲ್ಲಿ ಏರಿಕೆಯಾಗಲಿದೆ.
‘ಪ್ಯೂಚರ್ ಆಫ್ ವರ್ಲ್ಡ್ ರಿಲಿಜನ್ಸ್’ ಶೀರ್ಷಿಕೆಯಡಿ ಪಿವ್ ಸಂಶೋಧನಾ ಕೇಂದ್ರ ಪ್ರಕಟಿಸಿರುವ ವರದಿ ಪ್ರಕಾರ 2070ರ ವೇಳೆಗೆ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಶೇ. 79.4ರಿಂದ ಶೇ. 75.8ಕ್ಕೆ ಇಳಿಕೆಯಾಗಲಿದ್ದರೆ, ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ.15.2ರಿಂದ ಶೇ. 19.6ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
‘ಇತರ ಧರ್ಮಗಳಿಗೆ ಹೋಲಿಸಿದರೆ ಹಿಂದೂ ಜನಸಂಖ್ಯೆ ಬೆಳವಣಿಗೆ ನಿಧಾನವಾಗಿರಲಿದೆ. ಇದರಿಂದ ಜಾಗತಿಕ ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಸ್ವಲ್ಪ ಕಡಿಮೆಯಾಗಲಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಹಿಂದೂ ಮಹಿಳೆಯರಿಗೆ ಹೋಲಿಸಿದರೆ ಮುಸ್ಲಿಂ ಮಹಿಳೆಯರು ಹೆಚ್ಚು ಮಕ್ಕಳನ್ನು ಹಡೆಯುತ್ತಿದ್ದಾರೆ. ಅಲ್ಲದೆ, ಮುಸ್ಲಿಂ ಸಮುದಾಯದಲ್ಲಿ ಯುವಜನರ ಪ್ರಮಾಣವೂ ಹೆಚ್ಚಿದೆ. ಈ ಅಂಶಗಳು ಎರಡೂ ಸಮುದಾಯಗಳ ಜನಸಂಖ್ಯೆಯ ಪ್ರಮಾಣದಲ್ಲಿ ಬದಲಾವಣೆಗೆ ಕಾರಣವಾಗಲಿವೆ ಎಂದು ವರದಿ ವಿವರಿಸಿದೆ.
ಹಿಂದೂ ಮಹಿಳೆಯಲ್ಲಿ ಫಲವಂತಿಕೆ ಕುಸಿತ
ಜಾಗತಿಕ ಮಟ್ಟದಲ್ಲಿ ಇತರ ಧರ್ಮಗಳಿಗೆ ಹೋಲಿಸಿದರೆ ಮುಸ್ಲಿಂ ಸಮುದಾಯದಲ್ಲಿ ಫಲವಂತಿಕೆ ಪ್ರಮಾಣ ಹೆಚ್ಚಿದೆ ಎಂದು ವರದಿ ತಿಳಿಸಿದೆ. 2020ರಿಂದ 2025ರ ಅವಧಿಯಲ್ಲಿ ಮುಸ್ಲಿಂ ಮಹಿಳೆಯರ ಫಲವಂತಿಕೆ ದರ ಪ್ರತಿ ಮಹಿಳೆಗೆ ಸರಾಸರಿ 3.1ರಷ್ಟಿದ್ದು, ಮುಸ್ಲಿಮೇತರ ಮಹಿಳೆಯರಲ್ಲಿ ಈ ಪ್ರಮಾಣ 2.0ರಷ್ಟಿದೆ. ಹಿಂದೂ ಮಹಿಳೆಯರ ಫಲವಂತಿಕೆ ದರ 1.9ರಷ್ಟಿದ್ದರೆ, ಕ್ರೈಸ್ತ ಮಹಿಳೆಯರಲ್ಲಿ 2.5ರಷ್ಟಿದೆ.
2020ರಿಂದ 2070ರ ನಡುವಿನ ಐದು ದಶಕಗಳಲ್ಲಿ ಜಾಗತಿಕ ಹಿಂದೂ ಜನಸಂಖ್ಯೆ 19.9 ಕೋಟಿಯಷ್ಟು ಹೆಚ್ಚಳವಾಗಿ, ಸುಮಾರು 140 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಆದರೆ, ಇದೇ ಅವಧಿಯಲ್ಲಿ ವಿಶ್ವದ ಒಟ್ಟಾರೆ ಜನಸಂಖ್ಯೆಯ ಬೆಳವಣಿಗೆ ಇದಕ್ಕಿಂತಲೂ ವೇಗವಾಗಿ ಸಾಗಲಿದೆ. ಪರಿಣಾಮವಾಗಿ, ಜಾಗತಿಕ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಈಗಿನ ಶೇ.15ರಿಂದ ಶೇ.14ಕ್ಕೆ ಇಳಿಕೆಯಾಗಲಿದೆ ಎಂದು ವರದಿ ಅಂದಾಜಿಸಿದೆ.
ಭಾರತದ ಹೊರತಾಗಿ ಪಾಕಿಸ್ತಾನ ಮತ್ತು ಅಮೆರಿಕದಲ್ಲಿಯೂ ಹಿಂದೂ ಜನಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಪಾಕಿಸ್ತಾನದಲ್ಲಿ ಜನನ ಪ್ರಮಾಣವು ಮರಣ ಪ್ರಮಾಣಕ್ಕಿಂತ ಹೆಚ್ಚಿರುವುದು ಜನಸಂಖ್ಯೆಯ ಏರಿಕೆಗೆ ಕಾರಣವಾಗಲಿದೆ. ಅಮೆರಿಕದಲ್ಲಿ ವಲಸೆಯಿಂದಾಗಿ ಹಿಂದೂಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವರದಿ ವಿವರಿಸಿದೆ.
ಹಿಂದೂಗಳು ಬಹುಸಂಖ್ಯಾತರಾಗಿರುವ ನೇಪಾಳದಲ್ಲಿ ಪ್ರತಿ ಮಹಿಳೆಯ ಫಲವಂತಿಕೆ ದರ 2.0ರಷ್ಟಿದೆ. ಭಾರತ ಮತ್ತು ಬಾಂಗ್ಲಾದೇಶದಲ್ಲಿ ಈ ಪ್ರಮಾಣ ತಲಾ 1.9ರಷ್ಟಿದೆ. ಮೂರು ದಶಕಗಳ ಹಿಂದೆ ಹಿಂದೂ ಮಹಿಳೆಯರ ಫಲವಂತಿಕೆ ದರ ಪ್ರತಿ ಮಹಿಳೆಗೆ 3.3ರಷ್ಟಿತ್ತು ಎಂದು ವರದಿ ತಿಳಿಸಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೂ, ಮುಂದಿನ ದಿನಗಳಲ್ಲಿಯೂ ನೇಪಾಳ ಮತ್ತು ಭಾರತ ಮಾತ್ರ ಹಿಂದೂ ಬಹುಸಂಖ್ಯಾತ ರಾಷ್ಟ್ರಗಳಾಗಿ ಉಳಿಯಲಿವೆ ಎಂದು ವರದಿ ಅಂದಾಜಿಸಿದೆ
