ಬೆಂಗಳೂರು: ರಾಜ್ಯದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕಾಗದರಹಿತ ಆಸ್ತಿ ನೋಂದಣಿ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆದಿದೆ.
ನೂತನ ವ್ಯವಸ್ಥೆಯಲ್ಲಿ ಸಾರ್ವಜನಿಕರು ಆಸ್ತಿ ನೋಂದಣಿಗಾಗಿ ಕಾಗದದ ದಾಖಲೆಗಳನ್ನು ಹಿಡಿದು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ. ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ನೋಂದಣಿ ಪ್ರಕ್ರಿಯೆಯ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಬಹುದಾಗಿದೆ.
ನೂತನ ವ್ಯವಸ್ಥೆಯಲ್ಲಿ ನಾಗರಿಕರು ಸರ್ಕಾರದ ಅಧಿಕೃತ ಕಾವೇರಿ 2.0 ಪೋರ್ಟಲ್ಗೆ ತಮ್ಮ ಆಸ್ತಿ ನೋಂದಣಿ ದಾಖಲೆಗಳ ಕರಡನ್ನು ಅಪ್ಲೋಡ್ ಮಾಡಬೇಕು. ಬಳಿಕ ಸಂಬಂಧಪಟ್ಟ ಸಬ್ ರಿಜಿಸ್ಟ್ರಾರ್ ಆನ್ಲೈನ್ನಲ್ಲೇ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.
ದಾಖಲೆಗಳಲ್ಲಿನ ಹೆಸರು, ಸರ್ವೇ ನಂಬರ್ ಸೇರಿದಂತೆ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ನೋಂದಣಿಗೂ ಮುನ್ನವೇ ಅರ್ಜಿದಾರರಿಗೆ ಆನ್ಲೈನ್ ಮೂಲಕವೇ ತಿದ್ದುಪಡಿಗಾಗಿ ಹಿಂತಿರುಗಿಸಲಾಗುತ್ತದೆ. ಇದರಿಂದ ಕೊನೆಯ ಕ್ಷಣದಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳ್ಳುವ ಸಮಸ್ಯೆ ತಪ್ಪಲಿದೆ.
ಆಧಾರ್ ಮೂಲಕ ಡಿಜಿಟಲ್ ಸಹಿ:
ಪ್ರಸ್ತುತ ಕಾಗದದ ಮೇಲೆ ಸಹಿ ಮಾಡುವ ಬದಲು ಕಕ್ಷಿದಾರರು ಹಾಗೂ ಸಾಕ್ಷಿಗಳು ಆಧಾರ್ ಆಧಾರಿತ ಇ-ಸೈನ್ ಅಥವಾ ಡಿಜಿಟಲ್ ಸಹಿ ಮೂಲಕ ಸಹಿ ಮಾಡಬಹುದಾಗಿದೆ. ಇದರಿಂದ ಸಹಿ ಪ್ರಕ್ರಿಯೆ ಕೆಲವೇ ಸೆಕೆಂಡ್ಗಳಲ್ಲಿ ಪೂರ್ಣಗೊಳ್ಳಲಿದೆ.
ನೋಂದಣಿಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದಾಗ ಕೇವಲ ಗುರುತು ದೃಢೀಕರಣ, ಲೈವ್ ಫೋಟೋ ಹಾಗೂ ಬಯೋಮೆಟ್ರಿಕ್ ಬೆರಳಚ್ಚು ಪಡೆಯುವ ಪ್ರಕ್ರಿಯೆ ನಡೆಯಲಿದೆ. ಈ ಮೂಲಕ ಸುಮಾರು ಐದು ನಿಮಿಷಗಳಲ್ಲಿ ಕಚೇರಿಯಲ್ಲಿನ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಮಧ್ಯವರ್ತಿಗಳ ಹಾವಳಿಗೆ ಕಡಿವಾಣ:
ನೋಂದಣಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸುವ ವ್ಯವಸ್ಥೆ ಇರುವುದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ನಿರೀಕ್ಷೆಯಿದೆ. ಅಲ್ಲದೆ, ನೋಂದಣಿಯಾದ ಆಸ್ತಿ ದಾಖಲೆಗಳನ್ನು ಕರ್ನಾಟಕ ನೋಂದಾಯಿತ ದಸ್ತಾವೇಜು ಸಂಗ್ರಹಾಲಯದಲ್ಲಿ ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸಂಗ್ರಹಿಸಲಾಗುತ್ತದೆ.
ಇದರಿಂದ ಮಳೆ, ಬೆಂಕಿ, ಗೆದ್ದಲು ಅಥವಾ ಕಳ್ಳತನದಿಂದ ಮೂಲ ದಾಖಲೆಗಳು ಹಾಳಾಗುವ ಆತಂಕ ಇರುವುದಿಲ್ಲ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಾರ್ವಜನಿಕರು ತಮ್ಮ ಆಸ್ತಿ ಪತ್ರಗಳನ್ನು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಬ್ಯಾಂಕ್ ಸಾಲ ಸುಲಭ:
ಆಸ್ತಿಯನ್ನು ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆಯುವ ಸಂದರ್ಭದಲ್ಲಿಯೂ ಡಿಜಿಟಲ್ ದಾಖಲೆಗಳು ಅನುಕೂಲವಾಗಲಿವೆ. ಬ್ಯಾಂಕುಗಳು ಆನ್ಲೈನ್ ಮೂಲಕವೇ ದಾಖಲೆಗಳ ಅಸಲಿಯತ್ತನ್ನು ಪರಿಶೀಲಿಸಬಹುದಾಗಿದೆ. ಇದರಿಂದ ನಕಲಿ ದಾಖಲೆಗಳ ಮೂಲಕ ವಂಚನೆ ಮಾಡುವುದಕ್ಕೂ ಕಡಿವಾಣ ಬೀಳಲಿದೆ.
ರಾಜ್ಯದಾದ್ಯಂತ ಇರುವ 256 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹೈ-ಸ್ಪೀಡ್ ಸರ್ವರ್ಗಳು, ಅತ್ಯಾಧುನಿಕ ಕಂಪ್ಯೂಟರ್ಗಳು ಹಾಗೂ ಸ್ಕ್ಯಾನರ್ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ತಾಂತ್ರಿಕ ಸಮಸ್ಯೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರಿಹಾರ ಕಲ್ಪಿಸಲು ಪ್ರತ್ಯೇಕ ಐಟಿ ಸೆಲ್ ರಚಿಸುವ ಯೋಜನೆಯೂ ಇದೆ.
ಕಾಗದರಹಿತ ಆಸ್ತಿ ನೋಂದಣಿ ವ್ಯವಸ್ಥೆ ಜಾರಿಯಾದರೆ ಸಾರ್ವಜನಿಕರ ಸಮಯ ಉಳಿತಾಯವಾಗುವುದರ ಜತೆಗೆ ಕಚೇರಿಗಳ ಅಲೆದಾಟ, ದಾಖಲೆಗಳ ನಿರ್ವಹಣೆಯ ಸಮಸ್ಯೆ ಹಾಗೂ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗುವ ನಿರೀಕ್ಷೆಯಿದೆ.
