ಚೆನ್ನೈ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಹಲವಾರು ವರ್ಷಗಳ ನಂತರ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ವಿದಾಯ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮಂಗಳವಾರ ಅಧಿಕೃತವಾಗಿ ಧೋನಿ ವಿದಾಯವನ್ನು ಘೋಷಿಸಿದೆ. ಅಲ್ಲದೇ ಮುಂದಿನ ಆವೃತ್ತಿಗಳಲ್ಲಿ ತಂಡದ ಮೆಂಟರ್ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ ಎಂದು ಹೇಳಿದೆ.
ಚೆನ್ನೈ ಸೂಪರ್ ಕಿಂಗ್ಸ್ ಗೆ 5 ಬಾರಿ ಪ್ರಶಸ್ತಿ ತಂದುಕೊಟ್ಟ ಧೋನಿ ಕಳೆದೆ ಕೆಲವು ಆವೃತ್ತಿಗಳಲ್ಲಿ ಕೇವಲ ವಿಕೆಟ್ ಕೀಪರ್ ಆಗಿ ನಿಭಾಯಿಸುತ್ತಿದ್ದರು. ಜಡೇಜಾ ನಂತರ ಋತುರಾಜ್ ಗಾಯಕ್ವಾಡ್ ತಂಡದ ಸಾರಥ್ಯ ವಹಿಸಿದ್ದರು.
ಧೋನಿ 278 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 248 ಪಂದ್ಯಗಳಲ್ಲಿ ಸಿಎಸ್ಕೆ ಪರ ಆಡಿದ್ದಾರೆ. ಐಪಿಎಲ್ನಲ್ಲಿ ಅವರು ಒಟ್ಟು 5439 ರನ್ಗಳನ್ನು ಗಳಿಸಿದ್ದು, ಅದರಲ್ಲಿ 4865 ರನ್ಗಳು ಸಿಎಸ್ಕೆ ಪರ ಬಂದಿವೆ.
ಸಿಎಸ್ಕೆ ಪರ 24 ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಗಳನ್ನು ಆಡಿ, ಹೆಚ್ಚುವರಿಯಾಗಿ 449 ರನ್ಗಳನ್ನು ಗಳಿಸಿದ್ದಾರೆ. ಹೀಗಾಗಿ, ಸಿಎಸ್ಕೆ ಪರ ಅವರು ಆಡಿದ ಒಟ್ಟು 272 ಪಂದ್ಯಗಳಲ್ಲಿ (ಐಪಿಎಲ್ ಮತ್ತು ಸಿಎಲ್ಟಿ20 ಸೇರಿ) ಒಟ್ಟು 5314 ರನ್ಗಳನ್ನು ಕಲೆಹಾಕಿದ್ದಾರೆ.
2008ರಲ್ಲಿ ಪಾದಾರ್ಪಣೆ
2008ರ ಐಪಿಎಲ್ ಹರಾಜಿನಲ್ಲಿ ಸಿಎಸ್ಕೆ ತಂಡ ಎಂ.ಎಸ್. ಧೋನಿ ಅವರನ್ನು 1.5 ಮಿಲಿಯನ್ ಅಮೆರಿಕನ್ ಡಾಲರ್ಗೆ ಖರೀದಿಸಿತು. ಸಿಎಸ್ಕೆಯಲ್ಲಿನ ತಮ್ಮ ಆರಂಭಿಕ ದಿನಗಳಲ್ಲಿ, ಮೈಕೆಲ್ ಹಸ್ಸಿ, ಸ್ಟೀಫನ್ ಫ್ಲೆಮಿಂಗ್, ಮುತ್ತಯ್ಯ ಮುರಳೀಧರನ್ ಮತ್ತು ಮ್ಯಾಥ್ಯೂ ಹೇಡನ್ ಸೇರಿದಂತೆ ಕ್ರಿಕೆಟ್ ಲೋಕದ ದಿಗ್ಗಜರಿಗೆ ಧೋನಿ ನಾಯಕರಾಗಿದ್ದರು. ಧೋನಿ ಅವರ ನೇತೃತ್ವದಲ್ಲಿ ಸೂಪರ್ ಕಿಂಗ್ಸ್ ತಂಡವು 2010, 2011, 2018, 2021 ಮತ್ತು 2023ರಲ್ಲಿ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
2010 ಮತ್ತು 2011ರ ಸೀಸನ್ಗಳಲ್ಲಿ ಸತತವಾಗಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ, ಐಪಿಎಲ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ (defend ಮಾಡಿದ) ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ನಂತರ, ಎರಡು ವರ್ಷಗಳ ನಿಷೇಧದ ಬಳಿಕ ಸೂಪರ್ ಕಿಂಗ್ಸ್ ತಂಡವು ಮರಳಿದಾಗ ಮತ್ತು ‘ರೈಸಿಂಗ್ ಪುಣೆ ಸೂಪರ್ಜೈಂಟ್’ (ಈಗ ಅಸ್ತಿತ್ವದಲ್ಲಿಲ್ಲದ ತಂಡ) ಪರ ಎರಡು ಸೀಸನ್ಗಳನ್ನು ಆಡಿದ ನಂತರ ಧೋನಿ ಮತ್ತೆ ತಂಡಕ್ಕೆ ಮರಳಿದಾಗ, ಅವರು ಅನುಭವಿ ಆಟಗಾರರನ್ನೊಳಗೊಂಡ ತಂಡವನ್ನು ಮುನ್ನಡೆಸಿದರು.
ಟೂರ್ನಿಯಲ್ಲಿ ಯುವ ಆಟಗಾರರಿದ್ದ ತಂಡಗಳ ವಿರುದ್ಧ ಸೆಣಸಾಡಿದ ಈ ಅನುಭವಿ ಆಟಗಾರರ ಪಡೆಯನ್ನು ‘ಡ್ಯಾಡ್ಸ್ ಆರ್ಮಿ’ ಎಂದು ಕರೆಯಲಾಯಿತು; ಧೋನಿ ಅವರ ನಾಯಕತ್ವದಲ್ಲಿ ಈ ತಂಡವು 2018ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
