ಬೆಂಗಳೂರು: ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂಬ ಸಂಚಲನಕಾರಿ ಪ್ರಕರಣದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ, ಪ್ರಮುಖ ಆರೋಪಿತರಲ್ಲಿ ಒಬ್ಬರಾದ ಗಿರೀಶ್ ಮಟ್ಟಣ್ಣವರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯ ಸಾರಾಸಗಟಾಗಿ ವಜಾಗೊಳಿಸಿದೆ.
ಈ ತೀರ್ಪಿನ ಮೂಲಕ ತನಿಖೆಯಿಂದ ತಪ್ಪಿಸಿಕೊಳ್ಳಲು ತಾಂತ್ರಿಕ ನೆಪಗಳನ್ನು ಮುಂದಿಟ್ಟಿದ್ದ ಅರ್ಜಿದಾರರಿಗೆ ತೀವ್ರ ಮುಖಭಂಗವಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ವೇಗ ಸಿಕ್ಕಂತಾಗಿದೆ.
ಕೋರ್ಟ್ನಲ್ಲಿ ನಡೆದಿದ್ದೇನು? ದ್ವಂದ್ವ ನಿಲುವಿಗೆ ತರಾಟೆ:
ವಿಚಾರಣೆ ವೇಳೆ ಮಟ್ಟಣ್ಣವರ್ ಪರ ವಾದಿಸಿದ ಹಿರಿಯ ವಕೀಲ ಎಸ್. ಬಾಲಕೃಷ್ಣನ್ (ಬಾಲನ್), “ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೇ ದೂರು ನೀಡಬೇಕಿತ್ತು. ಆದರೆ ‘ಮುಸುಕುಧಾರಿ’ ಚಿನ್ನಯ್ಯ ಸರ್ಕಾರಿ ನೌಕರನಲ್ಲ. ಅಸಂಜ್ಞೇಯ ಅಪರಾಧಕ್ಕೆ ಪೊಲೀಸರು ನೇರವಾಗಿ ಎಫ್ಐಆರ್ ದಾಖಲಿಸಿರುವುದು ಕಾನೂನುಬಾಹಿರ. ಅಲ್ಲದೆ, ವಿಚಾರಣೆ ನೆಪದಲ್ಲಿ ಕಕ್ಷಿದಾರರಿಗೆ ಬೆಳಗಿನಿಂದ ರಾತ್ರಿಯವರೆಗೆ ಕೂರಿಸಿ ಕಿರುಕುಳ ನೀಡಲಾಗುತ್ತಿದೆ” ಎಂದು ಆಕ್ಷೇಪಿಸಿದರು.
ಇದಕ್ಕೆ ತೀವ್ರ ಪ್ರತಿವಾದ ಮಂಡಿಸಿದ ಎಸ್ಐಟಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್. ಜಗದೀಶ್, “ಮ್ಯಾಜಿಸ್ಟ್ರೇಟ್ ಅವರಿಂದ ಪೂರ್ವಾನುಮತಿ ಪಡೆದೇ ಕಾನೂನುಬದ್ಧವಾಗಿ ಎಫ್ಐಆರ್ ದಾಖಲಿಸಲಾಗಿದೆ. ತಾಂತ್ರಿಕ ನಿರ್ಬಂಧಗಳು ಅನ್ವಯವಾಗುವುದು ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಕೆಯಾದ ನಂತರವೇ ಹೊರತು, ತನಿಖೆಯ ಹಂತದಲ್ಲಲ್ಲ” ಎಂದು ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿದರು. ಅಲ್ಲದೆ, “ಈ ಹಿಂದೆ ಬೇರೊಂದು ಅರ್ಜಿಯಲ್ಲಿ (WP 29107/2025) ಇದೇ ಅರ್ಜಿದಾರರು ಪ್ರಕರಣದ ತನಿಖೆ ಸರಿಯಾಗಿ ನಡೆಯಲಿ ಎಂದು ಕೋರಿದ್ದರು. ಈಗ ತನಿಖೆ ತಮ್ಮ ಕೊರಳಿಗೆ ಸುತ್ತಿಕೊಳ್ಳುತ್ತಿದ್ದಂತೆ ರದ್ದು ಮಾಡಿ ಎನ್ನುತ್ತಿದ್ದಾರೆ” ಎಂದು ಅರ್ಜಿದಾರರ ದ್ವಂದ್ವ ನೀತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು.
ವಾದ ಆಲಿಸಿದ ನ್ಯಾಯಮೂರ್ತಿಗಳು, “ಮೂಲ ಎಫ್ಐಆರ್ ‘ಅಜ್ಞಾತ ವ್ಯಕ್ತಿ’ಗಳ ವಿರುದ್ಧ ದಾಖಲಾಗಿದೆ. ತನಿಖೆಯಲ್ಲಿ ಸಾಕ್ಷ್ಯ ಲಭ್ಯವಾದ ಕಾರಣ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಒಂದೆಡೆ ತನಿಖೆ ನಡೆಯಲಿ ಎನ್ನುತ್ತೀರಿ, ಇನ್ನೊಂದೆಡೆ ತನಿಖೆಯನ್ನೇ ರದ್ದು ಮಾಡಿ ಎನ್ನುತ್ತೀರಿ. ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ ಎಫ್ಐಆರ್ ರದ್ದು ಕೋರುವುದು ಅಕಾಲಿಕ” ಎಂದು ಅರ್ಜಿದಾರರ ದ್ವಂದ್ವ ನಿಲುವಿಗೆ ಚಾಟಿ ಬೀಸಿ ಅರ್ಜಿಯನ್ನು ವಜಾಗೊಳಿಸಿದರು.
ಕೋರ್ಟ್ ಕಲಾಪದ ಕಡಕ್ ಹೈಲೈಟ್ಸ್:
ತಾವರೆ ಎಲೆಯ ಮೇಲಿನ ನೀರಿನಂತಿರಬೇಕು ನ್ಯಾಯಾಧೀಶರ ಕೆಲಸ: ಕಲಾಪದ ನಡುವೆ ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, “ನ್ಯಾಯಾಧೀಶರ ಕೆಲಸ ತಾವರೆ ಎಲೆಯ ಮೇಲಿನ ನೀರಿನಂತಿರಬೇಕು. ನೀರಿನಲ್ಲೇ ಬೆಳೆಯಬೇಕು, ಆದರೆ ನೀರನ್ನು ಅಂಟಿಸಿಕೊಳ್ಳಬಾರದು. ಕಾನೂನುಬದ್ಧ ದಾಖಲೆಗಳ ಆಧಾರದ ಮೇಲೆ ಮಾತ್ರ ತೀರ್ಪು ನೀಡಬೇಕೇ ಹೊರತು, ನೈತಿಕ ವಿಚಾರಗಳು ತೀರ್ಪಿನೊಳಗೆ ಇಣುಕಬಾರದು” ಎಂದು ಮಾರ್ಮಿಕವಾಗಿ ನುಡಿದರು.
‘ಕಲ್ಪ್ರಿಟ್’ ಎಂದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಿ: “ನನ್ನ ಕಕ್ಷಿದಾರ ಒಬ್ಬ ಹೋರಾಟಗಾರ, ಅವರನ್ನು ಮಧ್ಯಂತರ ಅರ್ಜಿದಾರರು ‘ಕಲ್ಪ್ರಿಟ್’ (ಅಪರಾಧಿ) ಎಂದು ಕರೆದಿದ್ದಾರೆ” ಎಂಬ ವಕೀಲರ ವಾದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಎಲ್ಲಾ ಹೋರಾಟಗಾರರಿಗೂ ಯಾರೋ ಒಬ್ಬರು ಕಲ್ಪ್ರಿಟ್ ಅಂತಲೇ ಕರೆಯುವುದು. ನಿಮ್ಮ ಮರ್ಯಾದೆ ಹೋಗಿದ್ದರೆ ಮಾನನಷ್ಟ ಮೊಕದ್ದಮೆ ಹೂಡಿಕೊಳ್ಳಿ, ಅದಕ್ಕೆ ಎಫ್ಐಆರ್ ರದ್ದು ಕೋರುವ ಅರ್ಜಿ ಏಕೆ?” ಎಂದು ನೇರವಾಗಿ ಪ್ರಶ್ನಿಸಿದರು.
ಷಡ್ಯಂತ್ರದ ಹಿನ್ನೆಲೆ ಏನು?: ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಮುಸುಕುಧಾರಿ ವ್ಯಕ್ತಿ ನೀಡಿದ್ದ ದೂರಿನ ಸತ್ಯಾಸತ್ಯತೆ ಪತ್ತೆಗೆ ಸರ್ಕಾರ ಎಸ್ಐಟಿ ರಚಿಸಿತ್ತು. ತನಿಖೆ ನಡೆಸಿದ ಅಧಿಕಾರಿಗಳು, ದೂರುದಾರ ಚಿನ್ನಯ್ಯನ ಹೇಳಿಕೆಗಳಲ್ಲಿನ ವೈರುಧ್ಯಗಳನ್ನು ಬಯಲಿಗೆಳೆದಿದ್ದರು. ಕ್ಷೇತ್ರಕ್ಕೆ ಕಳಂಕ ತರಲು ವ್ಯವಸ್ಥಿತ ಷಡ್ಯಂತ್ರ ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಚಿನ್ನಯ್ಯ ಅಲಿಯಾಸ್ ಚಿನ್ನ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ವಿಠಲ ಗೌಡ ಹಾಗೂ ಸುಜಾತಾ ಭಟ್ ಸೇರಿದಂತೆ ಆರು ಮಂದಿಯ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ ಹಾಗೂ ನಕಲಿ ದಾಖಲೆ ತಯಾರಿಕೆ ಆರೋಪದಡಿ ತನಿಖೆ ತೀವ್ರಗೊಂಡಿದೆ.
ಮತ್ತೆ ಕೋರ್ಟ್ ಮೆಟ್ಟಿಲೇರಿದ್ದ ಮಟ್ಟಣ್ಣವರ್: ತನಿಖೆ ತಮ್ಮ ವಿರುದ್ಧವೇ ತಿರುಗುತ್ತಿದ್ದಂತೆ 2025ರ ನವೆಂಬರ್ನಲ್ಲಿಯೂ ಮಟ್ಟಣ್ಣವರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂದು ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ್ದ ನ್ಯಾಯಾಲಯ, ತನಿಖೆಗೆ ಸಹಕರಿಸುವಂತೆ ಸೂಚಿಸಿತ್ತು. ಇದೀಗ ಮತ್ತೆ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿರುವುದು ಆರೋಪಿಗಳಿಗೆ ದೊಡ್ಡ ಹಿನ್ನಡೆಯಾಗಿದೆ.
