ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಯುಜಿಸಿ-ನೀಟ್ ಪರೀಕ್ಷಾ ಅಕ್ರಮದ ತನಿಖೆ ನಡೆಸಲು ಎಫ್ ಐಆರ್ ದಾಖಲಿಸಿಕೊಂಡಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ಅನಾಮಧೇಯರನ್ನು ಉಲ್ಲೇಖಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಸಿಬಿಐ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕುರಿತು ತನಿಖೆ ನಡೆಸಲು ಮುಂದಾಗಿದೆ.
ರಾಷ್ಟ್ರೀಯ ಪ್ರವೇಶ ಪರೀಕ್ಷಾ ಸಂಸ್ಥೆ ಜೂನ್ 18ರಂದು ನಡೆಸಿದ ಪ್ರವೇಶ ಪರೀಕ್ಷೆಯ ಎರಡು ವಿಷಯಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿತ್ತು. ಒಂದೊಂದು ವಿಷಯಕ್ಕೂ 7ರಿಂದ 8 ಲಕ್ಷ ರೂ.ವನ್ನು ಅಭ್ಯರ್ಥಿಗಳಿಂದ ಸಂಗ್ರಹಿಸಲಾಗಿತ್ತು ಎಂಬುದು ಉತ್ತರ ಪ್ರದೇಶ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.
ಪ್ರವೇಶ ಪರೀಕ್ಷೆ ಅಕ್ರಮದಲ್ಲಿ ಉತ್ತರ ಪ್ರದೇಶ ಪೊಲೀಸರು ಇದುವರೆಗೆ 18 ಮಂದಿಯನ್ನು ಬಂಧಿಸಿದ್ದು, ಇದರಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಕೂಡ ಸೇರಿದ್ದಾರೆ. ಮತ್ತೊಂದೆಡೆ ಬಿಹಾರದ ಆರ್ ಜೆಡಿ ಪಕ್ಷದ ಮುಖಂಡರ ಆಪ್ತ ಇದರಲ್ಲಿ ಭಾಗಿಯಾಗಿದ್ದಾನೆ ಎಂದ ಆರೋಪಗಳು ಕೇಳಿಬಂದಿವೆ.