ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಮಾರುತಗಳ ಅಬ್ಬರ ಇನ್ನೂ 5 ದಿನಗಳ ಕಾಲ ಮುಂದುವರಿಯಲಿದ್ದು, ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ಶುಕ್ರವಾರ ಆರೆಂಜ್ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ. ಕೊಡಗು, ಮಂಡ್ಯ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.
ರಾಜಧಾನಿಯಲ್ಲಿ ಮೋಡ ಕವಿಡ ವಾತಾವರಣ: ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಸಂಜೆ ವೇಳೆಗೆ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 23ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಗಾಳಿಯಿರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.



