Friday, May 22, 2026
Google search engine
Homeರಾಜ್ಯ50,000 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ವಶಕ್ಕೆ ಕಾನೂನು ಹೋರಾಟ: ಸಚಿವ ಈಶ್ವರ ಖಂಡ್ರೆ

50,000 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ವಶಕ್ಕೆ ಕಾನೂನು ಹೋರಾಟ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಎಚ್.ಎಂ.ಟಿ., ಭಾರತೀಯ ವಾಯುಪಡೆ, ಖಾಸಗಿ ರಬ್ಬರ್ ತೋಟ ಕಂಪನಿಗಳ ವಶದಲ್ಲಿರುವ ಸುಮಾರು 50 ಸಾವಿರ ಕೋಟಿ ರೂ.ಗೆ ಮೌಲ್ಯದ ಅರಣ್ಯಭೂಮಿಯನ್ನು ಮರಳಿ ಪಡೆದು, ಹಸಿರು ಹೊದಿಕೆ ರಕ್ಷಿಸಲು, ಅರಣ್ಯ ಸಂವರ್ಧನೆ ಮಾಡಲು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿಂದು ನಡೆದ ವಿಶ್ವ ಜೀವವೈವಿಧ್ಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆ ನಮ್ಮನ್ನು ಶಪಿಸಬಾರದು ಎಂದರೆ,ನಾವು ಆರೋಗ್ಯಪೂರ್ಣ ಪ್ರಕೃತಿ ಪರಿಸರವನ್ನು ಬಿಟ್ಟು ಹೋಗಬೇಕು, ಇದಕ್ಕಾಗಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಮಾಡಬೇಕು ಎಂದರು.

ರಾಜ್ಯ ಸರ್ಕಾರ ಬೆಂಗಳೂರು ಹೆಸರುಘಟ್ಟ ಕೆರೆಯ ಸುತ್ತಮುತ್ತಲಿನ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದೆ. ಇದರ ಜೊತೆಗೆ ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ, 250 ಕೋಟಿ ರೂ. ವೆಚ್ಚದ ಈ ಉದ್ಯಾನಕ್ಕೆ ಮುಖ್ಯಮಂತ್ರಿಗಳು ಮೊದಲ ಹಂತದ ಕಾಮಗಾರಿಗೆ 50 ಕೋಟಿ ರೂ. ಹಂಚಿಕೆ ಮಾಡಿದ್ದಾರೆ ಎಂದರು.

ಆನೆ ಕಾರಿಡಾರ್, ಹುಲಿ ಕಾರಿಡಾರ್ ಮರು ಸ್ಥಾಪನೆಗೆ ಕ್ರಮ

ವನ್ಯಜೀವಿ- ಮಾನವ ಸಂಘರ್ಷವನ್ನು ತಡೆಗಟ್ಟುವುದು ಸರ್ಕಾರದ ಆದ್ಯತೆಯಾಗಿದೆ. ದುಬಾರೆಯಲ್ಲಿ ಇತ್ತೀಚೆಗೆ ನಡೆದ ದುರ್ಘಟನೆ ಅತ್ಯಂತ ಆಘಾತಕಾರಿ. ರಾಜ್ಯ ಕಂಡು ಕೇಳರಿಯದಂತಹ ಘಟನೆಗಳು ನಡೆಯುತ್ತಿದ್ದು, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳಕ್ಕೆ ಆನೆಗಳ ಕಾರಿಡಾರ್ ವಿಭಜನೆ, ಹುಲಿಗಳ ಪಥದಲ್ಲಿನ ಬದಲಾವಣೆ, ಹೆಚ್ಚುತ್ತಿರುವ ವನ್ಯಮೃಗಗಳ ಸಂಖ್ಯೆ ಹಾಗೂ ಕ್ಷೀಣಿಸುತ್ತಿರುವ ಅರಣ್ಯ ಕಾರಣವಾಗಿದೆ ಎಂದರು.

ಹೀಗಾಗಿಯೇ ಸರ್ಕಾರ ಅರಣ್ಯ ಒತ್ತುವರಿ ತೆರವಿಗೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಕಳೆದ 3 ವರ್ಷಗಳಲ್ಲಿ ಸುಮಾರು 12204 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ. ಯಾವುದೇ ಹೊಸ ಒತ್ತುವರಿಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ ಎಂದರು.

ಆನೆ, ಹುಲಿ ಕಾರಿಡಾರ್ ವಿಭಜನೆ ಆಗಿರುವ ಕಡೆಯಲ್ಲಿ ಕಾರಿಡಾರ್ ಮರು ಸ್ಥಾಪನೆ ಕುರಿತಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ, 3 ವರ್ಷದಲ್ಲಿ ರಾಜ್ಯದಾದ್ಯಂತ 11 ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಕರ್ನಾಟಕ ಜೀವವೈವಿಧ್ಯ ಮಂಡಳಿಯ ವತಿಯಿಂದ ಬೀದರ್ ನಲ್ಲಿ ಪಾಪಂಪರಿಕ ವೈದ್ಯರ ಸಮ್ಮೇಳನವನ್ನೂ ಆಯೋಜಿಸಲಾಗಿತ್ತು. ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಈ ಪಾರಂಪರಿಕ ವೈದ್ಯಪದ್ಧತಿ ಇನ್ನೂ ಪರಿಣಾಮಕಾರಿಯಾಗಿದ್ದು, ಇವರ ಚಿಕಿತ್ಸೆಗೆ ಅನುಕೂಲ ಕಲ್ಪಿಸಲು ಗಿಡಮೂಲಿಕೆಗಳ ರಕ್ಷಣೆಗೆ ಸರ್ಕಾರ ಕ್ರಮವಹಿಸಿದೆ. ಗಿಡಮೂಲಿಕೆ ವನ ನಿರ್ವಹಣಾ ಸಮಿತಿಗಳನ್ನು ರಚಿಸಿದೆ ಎಂದರು.

5 ಪಾರಪಂಪರಿಕ ಜೀವವೈವಿಧ್ಯತೆಯ ತಾಣ ಘೋಷಣೆ

ದೇವನಹಳ್ಳಿ ಬಳಿಯ ನಲ್ಲೂರು ಹುಣಸೆತೋಪು, ಬೆಂಗಳೂರಿನ ಗಾಂಧಿಕೃಷಿ ವಿಜ್ಞಾನ ಕೇಂದ್ರ ಪರಿಸರ, ಚಿಕ್ಕಮಗಳೂರು ಹೊಗರೆಖಾನ್, ಸಾಗರ ತಾಲೂಕಿನ ಅಂಬರಗುಡ್ಡ ಮತ್ತು ವಿಜಯಪುರ, ಮಮದಾಪುರದ ಸಸ್ಯಕಾಶಿಯನ್ನು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಣೆ ಮಾಡಲಾಗಿದೆ, ಇದರ ಜೊತೆಗೆ ದೇಶದ ಪ್ರಥಮ ವನ್ಯಜೀವಿ ಧಾಮ ಅಪ್ಸರಕೊಂಡ ಮುಗಳಿಯ ಘೋಷಣೆ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಜೀವವೈವಿಧ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ವಾರ್ಷಿಕ ಪ್ರಶಸ್ತಿ ಮತ್ತು ಪ್ರಬಂಧ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ರಾಜೇಗೌಡ, ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಮೊಹಮದ್ ತಬ್ರೇಜ್ ಷರೀಫ್,  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ತುಡುವೆ ಜೇನು, ಮರಗಂತಿ ಕಪ್ಪೆಗೆ ರಾಜ್ಯ ಕೀಟ, ಉಭಯ ಜೀವಿ ಘೋಷಣೆ?

ತುಡುವೆ ಜೇನು ಮತ್ತು ಮಲೆನಾಡಿನ ಮರಗಂತಿ ಕಪ್ಪೆ (Malabar Tree Toad) ಅನ್ನು ಅನುಕ್ರಮವಾಗಿ ರಾಜ್ಯ ಕೀಟ ಮತ್ತು ರಾಜ್ಯ ಉಭಯಜೀವಿ ಎಂದು ಅಧಿಕೃತವಾಗಿ ಘೋಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಜೀವವೈವಿಧ್ಯತೆಯ ರಕ್ಷಣೆಯ ಮಹತ್ವವನ್ನು ಸಾರಲು ಹಲವು ದೇಶಗಳು ತನ್ನದೇ ಆದ ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಪ್ರಾಣಿ ಮತ್ತು ರಾಷ್ಟ್ರೀಯ ವೃಕ್ಷವನ್ನು ಘೋಷಿಸುತ್ತವೆ. ರಾಜ್ಯ ಸರ್ಕಾರ ಕೂಡ ಶ್ರೀಗಂಧವನ್ನು ತನ್ನ ರಾಜ್ಯ ವೃಕ್ಷವೆಂದು, ಆನೆಯನ್ನು ರಾಜ್ಯ ಪ್ರಾಣಿ ಎಂದು ಹಾಗೂ ನಿಲಕಂಠ ಪಕ್ಷಿಯನ್ನು ರಾಜ್ಯ ಪಕ್ಷಿ ಎಂದು ಘೋಷಿಸಿದೆ, ಇದರ ಜೊತೆಗೆ ಹಳದಿ ಕೆಂಪು ಬಣ್ಣದ ರೆಕ್ಕೆಯ ದೊಡ್ಡ ಚಿಟ್ಟೆಯನ್ನು ರಾಜ್ಯ ಚಿಟ್ಟೆ ಎಂದು ಘೋಷಣೆ ಮಾಡಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments