Friday, May 22, 2026
Google search engine
Homeಬೆಂಗಳೂರುಬೌರಿಂಗ್ ಆಸ್ಪತ್ರೆ ದುರಂತಕ್ಕೆ ನಿರ್ಲಕ್ಷ್ಯವೇ ಕಾರಣ: ಲೋಕಾಯುಕ್ತ ವರದಿ

ಬೌರಿಂಗ್ ಆಸ್ಪತ್ರೆ ದುರಂತಕ್ಕೆ ನಿರ್ಲಕ್ಷ್ಯವೇ ಕಾರಣ: ಲೋಕಾಯುಕ್ತ ವರದಿ

ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಮೃತಪಟ್ಟ ದಾರುಣ ಘಟನೆಗೆ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯವೇ ಕಾರಣ ಎಂದು ಲೋಕಾಯುಕ್ತ ವಿಶೇಷ ತಂಡ ವಿಸ್ತೃತ ವರದಿ ನೀಡಿದೆ.

ಏಪ್ರಿಲ್ 29ರಂದು ಭಾರೀ ಗಾಳಿ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಬಿದ್ದು ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಅಸುನೀಗಿದ್ದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ಬಿ.ಎಸ್.ಪಾಟೀಲ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಸಮಗ್ರ ತನಿಖೆ ನಡೆಸುವಂತೆ ಓರ್ವ ಜಿಲ್ಲಾ ನ್ಯಾಯಾಧೀಶರು, ಇಂಜಿನಿಯರ್ ಹಾಗೂ ಪೊಲೀಸರು ಒಳಗೊಂಡಂತೆ ವಿಶೇಷ ತಂಡ ರಚಿಸಿದ್ದರು.

ಭಾರತೀಯ ಕಟ್ಟಡ ಸಂಹಿತೆ ಪ್ರಕಾರ, ಸಾರ್ವಜನಿಕ ಕಟ್ಟಡಗಳ ಸುತ್ತ 1.5ಮೀ ನಿಂದ 2.4 ಮೀ ಎತ್ತರದ ಗೋಡೆ ಇರಬೇಕು. ಆದರೆ, ಕುಸಿದು ಬಿದ್ದಿರುವ ಗೋಡೆಯ ಎತ್ತರ ಸರಿಸುಮಾರು 2.8 ಮೀಟರ್ ಆಗಿತ್ತು. ಅವೈಜ್ಞಾನಿಕವಾಗಿ ಗೋಡೆ ಹಿಂದೆ 1.8 ಮೀ ಎತ್ತರಕ್ಕೆ ಮಣ್ಣು ತುಂಬಲಾಗಿತ್ತು. ಇದನ್ನು ತಡೆಯುವ ಸಾಮರ್ಥ್ಯ ಅದಕ್ಕೆ ಇರಲಿಲ್ಲ. ಅರ್ಥ್ ರಿಟೈನಿಂಗ್ ಸ್ಚಕ್ಚರ್ ರೀತಿ ಗೋಡೆ ಇರಲಿಲ್ಲ. ಬದಲಾಗಿ ಸ್ವಂತ ತೂಕ ತಡೆಯುವ ಸಾಮರ್ಥ್ಯವಿತ್ತು. ಸರಾಗವಾಗಿ ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲ. ಸ್ಥಳದಲ್ಲಿ ನೀರು ಇಂಗುವ ರಂಧ್ರದ ಒತ್ತಡ ಹೆಚ್ಚಾಗಿದೆ. ಗೋಡೆಯಲ್ಲಿ ನೀರು ಸೋರಿಕೆ ತಡೆಯಲು ಹಾಗೂ ನೀರು ಬಸಿಯಲು ಸಣ್ಣ ರಂಧ್ರಗಳೇ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

2008ರಲ್ಲಿ ಲಾರಿ ಗುದ್ದಿ ಕಾಂಪೌಂಡ್ ಬಿದ್ದಿದ್ದು, ಹಾನಿಗೊಳಗಾದ ಗೋಡೆಯನ್ನ ಮರುನಿರ್ಮಾಣ ಮಾಡಲಾಗಿತ್ತು. 2009ರಿಂದ 2016ರವರೆಗಿನ ಅವಧಿಯಲ್ಲಿ ಖಾಲಿ ಜಾಗದಲ್ಲಿ ಗಿಡ ಬೆಳೆದಿದ್ದು, ಕಟ್ಟಡದ ಅವಶೇಷಗಳನ್ನು ಅಲ್ಲಿ ತುಂಬಲಾಗಿತ್ತು. ಗುತ್ತಿಗೆ ಪಡೆದ ಸಂಸ್ಥೆಯಲ್ಲಿ ಇಂಜಿನಿಯರ್ ಹುದ್ದೆ ಇರಲಿಲ್ಲ. ಹುದ್ದೆ ನೇಮಕಕ್ಕೆ ಅವಕಾಶವಿದ್ದರೂ ನೇಮಕ ಮಾಡಿಲ್ಲ. ಫುಟ್‌ಪಾತ್ ಅತಿಕ್ರಮಣವಾಗಿದ್ದು, ಪಾದಚಾರಿ ಮಾರ್ಗದಲ್ಲಿ ಅಂಗಡಿ-ಮುಂಗಟ್ಟು ಇಟ್ಟುಕೊಂಡರೂ ಜಿಬಿಎ ಅಧಿಕಾರಿಗಳು ತೆರವು ಮಾಡಿಲ್ಲ.‌ ಈ ಹಿಂದೆ ನ್ಯಾಯಾಲಯದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಜಿಬಿಎ ಅಧಿಕಾರಿಗಳು ಸಂಬಂಧಪಟ್ಟ ಕ್ರಮ ತೆಗೆದುಕೊಳ್ಳುವ ಅವಕಾಶವಿದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೇ 21ರಂದು ತನಿಖಾ ತಂಡವು ವಿಚಾರಣೆ ವೇಳೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ನಗರಾಭಿವೃದ್ಧಿ ಹಾಗೂ ಜಿಬಿಎ ಅಧಿಕಾರಿಗಳ ವಿಚಾರಣೆ ನಡೆಸಿದೆ. ಒಂದು ತಿಂಗಳಲ್ಲಿ ಹೈಕೋರ್ಟ್ ಆದೇಶದಂತೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡುವುದಾಗಿ ನಗರಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿಗಳು ಹೇಳಿದ್ಧಾರೆ. ಭವಿಷ್ಯದಲ್ಲಿ ನಗರದಾದ್ಯಂತ ಶಿಥಿಲೀಕರಣ ಹಾಗೂ ಹಳೆಯ ಕಟ್ಟಡ ಹಾಗೂ ಗೋಡೆಗಳನ್ನು ಗುರುತಿಸಿ, ಅವಘಡ ಆಗದಂತೆ ಎಚ್ಚರಿಕೆ ವಹಿಸಲು ಲೋಕಾಯುಕ್ತರು ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments